
ಬೆಳ್ಳಾರೆಯ ನಿಂತಿಕಲ್ಲು ಜಂಕ್ಷನ್ನಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ವರ್ತಿಸುತ್ತಿದ್ದ 12 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.


ಬೆಳ್ಳಾರೆ: ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪದ ಮೇಲೆ ಬೆಳ್ಳಾರೆ ಪೊಲೀಸರು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸ್ಥಳದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಫೆ.1 ರಂದು ಸಂಜೆ ಬೆಳ್ಳಾರೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ರವೀಂದ್ರ ಅವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಸುಮಾರು 8:15 ರ ಸಮಯದಲ್ಲಿ ಮುರುಳ್ಯ ಗ್ರಾಮದ ನಿಂತಿಕಲ್ಲು ಜಂಕ್ಷನ್ ಬಳಿ 12 ಜನರ ತಂಡವೊಂದು ಗುಂಪು ಸೇರಿತ್ತು.
ಸದ್ರಿ ವ್ಯಕ್ತಿಗಳು ಯಾವುದೋ ಅಪರಾಧ ಎಸಗುವ ಉದ್ದೇಶದಿಂದ ಬಲಪ್ರಯೋಗ ಮಾಡುತ್ತಾ, ಸಾರ್ವಜನಿಕರಿಗೆ ಭಯವಾಗುವಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗಲಾಟೆ ಮಾಡಿಕೊಂಡಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.


ಪೊಲೀಸ್ ಕಾರ್ಯಾಚರಣೆ: ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಎಂಟು ಮಂದಿ ಪರಾರಿಯಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಕೀರ್ತನ್ ಕೆ (18), ಪುನೀತ್ ಎಂ (25), ಸತೀಶ್ ಎಸ್ (23), ಮತ್ತು ನಮಿತ್ ಕುಮಾರ್ ಡಿ (20) ಎಂದು ಗುರುತಿಸಲಾಗಿದೆ.
ಪರಾರಿಯಾದ ಇತರ ಆರೋಪಿಗಳು ಎಡಮಂಗಲದ ಸಚಿನ್ ಕೆ.ಬಿ (A7) ಸುಜಿತ್ (A8) ವಸಂತ (A10) ಬಾಲಚಂದ್ರ (A11), ಯೋಗಾನಂದ (A12) ಮೋಹನ್ (A5): ಎಣ್ಮೂರಿನ ಸಚಿನ್ (A9): ವಿನುತ್ (A6) ಎಂದು ಹೆಸರಿಸಲಾಗಿದೆ. ಒಟ್ಟು 12 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 194(2), 352, ಮತ್ತು 115(2) ಅಡಿಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.
