
ಮಂಗಳೂರಿನ ಬಿಜೈ ನಿವಾಸಿಯೊಬ್ಬರಿಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ ಮೆಸ್ಕಾಂ ಉದ್ಯೋಗಿ ವಿರುದ್ಧ ಬರ್ಕೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.


ಮಂಗಳೂರು: ಮೊಬೈಲ್ ಫೋನ್ ಮೂಲಕ ಕಡಬ ಮೂಲದ ವ್ಯಕ್ತಿಯೊಬ್ಬರಿಗೆ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬರ್ಕೆ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಡಬದ ಇಚಿಲಂಪಾಡಿ ನಿವಾಸಿ ,ಪ್ರಸ್ತುತ ಮಂಗಳೂರಿನ ಬಿಜೈ ನಲ್ಲಿ ವಾಸವಿರುವ ಅಬ್ರಹಂ ಫಿಲಿಪ್ (41) ಎಂಬುವರು ಈ ಸಂಬಂಧ 2025 ರ ಜುಲೈ 8 ರಂದು ದೂರು ನೀಡಿದ್ದರು. ಅಬ್ರಹಂ ಅವರು ಚರ್ಚ್ ಪಾದ್ರಿಯೊಬ್ಬರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ಇವರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಘಟನೆ ವಿವರ: 2025ರ ಜುಲೈ 3ರಂದು ಬೆಳಿಗ್ಗೆ 10:12 ರಿಂದ 10:43ರ ಅವಧಿಯಲ್ಲಿ ಆರೋಪಿ ಕಾವೂರಿನ ಮ್ಯಾಥ್ಯೂ ಎಂಬಾತನು ತನ್ನ ಮೊಬೈಲ್ ಸಂಖ್ಯೆಯಿಂದ ಅಬ್ರಹಂ ಅವರ ಮೊಬೈಲ್ಗೆ ಕರೆ ಮಾಡಿದ್ದನು. ಈ ವೇಳೆ ಆರೋಪಿಯು ತುಳು ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಅರ್ಜಿದಾರರ ಹೆತ್ತವರಿಗೂ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.


ತನಿಖೆ ಮತ್ತು ಕಾನೂನು ಕ್ರಮ: ಬರ್ಕೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿನಾಯಕ ತೋರಗಲ್ ಅವರು ಪ್ರಕರಣದ ತನಿಖೆ ನಡೆಸಿದ್ದಾರೆ. ತನಿಖೆಯ ಭಾಗವಾಗಿ ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಎಫ್.ಎಸ್.ಎಲ್ ತಜ್ಞರ ವರದಿಯಲ್ಲಿ ಧ್ವನಿ ಮಾದರಿಯು ಆರೋಪಿಯದ್ದೇ ಎಂದು ದೃಢಪಟ್ಟಿದೆ .
ಆರೋಪಿ ಕಾವೂರಿನ ನಿವಾಸಿಯಾಗಿದ್ದು, ಮೆಸ್ಕಾಂ (MESCOM) ಉದ್ಯೋಗಿಯಾಗಿರುವುದಾಗಿ ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352 ಮತ್ತು 351(2) ರ ಅಡಿಯಲ್ಲಿ ಮಂಗಳೂರಿನ 6ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ
