
ಕಡಬ-ಪಂಜ ರಸ್ತೆಯ ಓಂತ್ರಡ್ಕವರೆಗಿನ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕಿಯ ಗಡುವು ಮೀರಿದರೂ ರಸ್ತೆ ಸರಿಪಡಿಸದ ಗುತ್ತಿಗೆದಾರನ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆದಿದೆ.


ಕಡಬ: ಕಡಬ-ಪಂಜ ರಸ್ತೆಯ ಕಡಬ ಮುಖ್ಯ ಪೇಟೆಯಿಂದ ಓಂತ್ರಡ್ಕವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರ ತಾಳ್ಮೆ ಕಟ್ಟೆಯೊಡೆದಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರು ನೀಡಿದ್ದ ಕಟ್ಟುನಿಟ್ಟಿನ ಗಡುವು ಮೀರಿದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈಗ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮದ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಗುಂಡಿಮಯ ರಸ್ತೆ: ಸವಾರರ ಪ್ರಾಣಸಂಕಟ: ಕಡಬ ಮುಖ್ಯ ಪೇಟೆಯಿಂದ ಮೆಸ್ಕಾಂ ಕಚೇರಿವರೆಗೆ ಡಾಮರೀಕರಣ ಮಾಡಲಾಗಿದೆಯಾದರೂ, ಅಲ್ಲಿಂದ ಓಂತ್ರಡ್ಕ ಶಾಲೆಯವರೆಗಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಎರಡು ವಾರಗಳ ಹಿಂದೆ ಗುಂಡಿಗಳಿಗೆ ಜಲ್ಲಿ ಹಾಕಲಾಗಿದ್ದರೂ, ಅವುಗಳನ್ನು ಸರಿಯಾಗಿ ರೋಲಿಂಗ್ ಮಾಡದ ಕಾರಣ ಜಲ್ಲಿಕಲ್ಲುಗಳು ರಸ್ತೆಯಾದ್ಯಂತ ಚಲ್ಲಾಪಿಲ್ಲಿಯಾಗಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಾಸಕಿಯ ಸೂಚನೆಗೂ ಬೆಲೆಯಿಲ್ಲ!: ಕೆಲವು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಬಾಕಿ ಉಳಿದಿರುವ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ, ಪೂರ್ಣ ರಸ್ತೆಯನ್ನು ಒಂದು ತಿಂಗಳೊಳಗೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ತಿಂಗಳುಗಳೇ ಕಳೆದರೂ ಗುತ್ತಿಗೆದಾರ ಮಾತ್ರ ಕಾಮಗಾರಿ ಆರಂಭಿಸುವ ಲಕ್ಷಣ ತೋರುತ್ತಿಲ್ಲ.
ಕಾನೂನು ಕ್ರಮಕ್ಕೆ ಮುಂದಾದ ಹೋರಾಟಗಾರರು: ಗುತ್ತಿಗೆದಾರನ ಈ ವಿಳಂಬ ನೀತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯರು ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಕೆಲಸ ಆರಂಭಿಸಲು ವಿಳಂಬ ಮಾಡುತ್ತಿರುವ ಗುತ್ತಿಗೆದಾರನ ಹಳೆಯ ಟೆಂಡರ್ ಅನ್ನು ಕೂಡಲೇ ರದ್ದುಪಡಿಸಿ, ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಹೊಸದಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಜನಸಾಮಾನ್ಯರ ಸಂಚಾರಕ್ಕೆ ತೊಂದರೆ ನೀಡುತ್ತಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಲಾಗುತ್ತಿದೆ.


ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ?: ಪ್ರಮುಖ ರಸ್ತೆಯ ದುರಸ್ತಿ ಕಾರ್ಯದಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುತ್ತಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ಈಗಾಗಲೇ ವಕೀಲರ ತಂಡವೊಂದನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಅನುದಾನವಿದ್ದರೂ ಸಾಗದ ಕೆಲಸ :ರಸ್ತೆ ಅಭಿವೃದ್ಧಿಗೆ ಮೊದಲ ಹಂತದಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ನಂತರ ಮತ್ತೊಂದು 1 ಕೋಟಿ ರೂ. ಮಂಜೂರಾಗಿದೆ. ಒಟ್ಟು 2 ಕೋಟಿ ರೂ. ಅನುದಾನ ಲಭ್ಯವಿದ್ದರೂ ಗುತ್ತಿಗೆದಾರನ ನಿರಾಸಕ್ತಿಯಿಂದಾಗಿ ಕಾಮಗಾರಿ ಬಾಕಿ ಉಳಿದಿದೆ. ಅಧಿಕಾರಿಗಳ ಪ್ರಕಾರ ‘ಎಗ್ರಿಮೆಂಟ್ ಪ್ರೊಸೆಸ್’ ಹಂತದಲ್ಲಿದೆ ಎಂಬ ನೆಪ ಸಿಗುತ್ತಿದೆಯಾದರೂ, ಗುತ್ತಿಗೆದಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
