ಕಡಬ: ಕಾಡಾನೆ ಎದುರಾದಾಗ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡ ಸವಾರ| ಆನೆ ದಾಳಿಗೆ ಬೈಕ್ ನಜ್ಜುಗುಜ್ಜು

kadaba times

 ಕೊಂಬಾರು-ಸಿರಿಬಾಗಿಲಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.

kadaba times
uniq

ಕಡಬ: ತಾಲೂಕಿನ ಕೊಂಬಾರು ಮತ್ತು ಸಿರಿಬಾಗಿಲು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಗುರುವಾರ ಸಂಜೆ ವಿನಯ್ ಅಗರಿ ಎಂಬವರು ಆನೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಬೆನ್ನಲ್ಲೇ ಗ್ರಾಮಸ್ಥರ ಆಕ್ರೋಶ ಕಟ್ಟೆಯೊಡೆದಿದೆ. ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಕೊಂಬಾರು ಕೊಲ್ಪೆ ಮಿತ್ತಬೈಲು ರಸ್ತೆಯಲ್ಲಿ ವಿನಯ್ ಅಗರಿ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಡಾನೆ ಎದುರಾಗಿದೆ. ಜೀವಭಯದಿಂದ ಅವರು ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ರಸ್ತೆಯಲ್ಲಿದ್ದ ಬೈಕ್ ಅನ್ನು ಆನೆಯು ಎತ್ತಿ ಎಸೆದು, ತುಳಿದು ಸಂಪೂರ್ಣ ನಜ್ಜುಗುಜ್ಜು ಮಾಡಿದೆ.

kadaba times
kadaba times

ಮೀಸಲು ಅರಣ್ಯದ ಅಂಚಿನಲ್ಲಿರುವ ಈ ಗ್ರಾಮಗಳಲ್ಲಿ ಆನೆಗಳು ನಿರಂತರವಾಗಿ ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಅಡಿಕೆ, ತೆಂಗು, ಬಾಳೆ ಸೇರಿದಂತೆ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳು ಆನೆಗಳ ಪಾಲಾಗುತ್ತಿವೆ. “ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ, ತೋಟಕ್ಕೆ ಹೋಗಲು ಭಯವಾಗುತ್ತಿದೆ,” ಎಂದು ಸ್ಥಳೀಯ ಕೃಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಕೇವಲ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರೆ ಸಾಲದು, ಕಾಡಾನೆಗಳ ನಿಯಂತ್ರಣಕ್ಕೆ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಎದುರಾದೀತು,” ಎಂದು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

Related Articles

Latest Articles