
ಕಡಬದ ಜೇಸಿಐ ಹಾಗೂ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ವತಿಯಿಂದ ಉಚಿತ ಎಲುಬು ತಪಾಸಣಾ ಶಿಬಿರ ನಡೆಯಿತು. ಎಲುಬಿನ ಆರೋಗ್ಯದ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿ ನೀಡಲಾಯಿತು.


ಕಡಬ: ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೇಸಿಐ ಕಡಬ ಕದಂಬ ಹಾಗೂ ಕಡಬದ ಪ್ರತಿಷ್ಠಿತ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಎಲುಬು ಖನಿಜ ಸಾಂದ್ರತೆ (Bone Mineral Density – BMD) ತಪಾಸಣಾ ಶಿಬಿರವು ಕಡಬದಲ್ಲಿ ಯಶಸ್ವಿಯಾಗಿ ಜರುಗಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೇಸಿ ವಲಯಾಧಿಕಾರಿ ಜಗದೀಶ್ ರೈ ಬೆಳ್ಳಾರೆ ಅವರು, “ಇಂದಿನ ಒತ್ತಡದ ಜೀವನಶೈಲಿಯಲ್ಲಿ ನಾವು ಆರೋಗ್ಯವಂತರಾಗಿರಲು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅನೇಕ ರೋಗಗಳು ಉಲ್ಬಣಿಸುವ ಮೊದಲು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮುಂಜಾಗ್ರತೆ ವಹಿಸಿ ಮುಂಚಿತವಾಗಿ ತಪಾಸಣೆ ಮಾಡಿಸಿಕೊಂಡರೆ ಭವಿಷ್ಯದ ದೊಡ್ಡ ಅನಾಹುತಗಳಿಂದ ಪಾರಾಗಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಅಪರೂಪದ ತಪಾಸಣೆಯನ್ನು ಉಚಿತವಾಗಿ ನೀಡುತ್ತಿರುವ ಸಂಘಟಕರ ಸಾಮಾಜಿಕ ಕಳಕಳಿ ಶ್ಲಾಘನೀಯ,” ಎಂದು ಹಾರೈಸಿದರು.
ಶಿಬಿರದ ಮುಖ್ಯ ವೈದ್ಯಾಧಿಕಾರಿಯಾಗಿ ಭಾಗವಹಿಸಿದ್ದ ಎಲುಬು ಮತ್ತು ಕೀಲು ತಜ್ಞ ಡಾ| ಶಮಂತ್ ವೈ.ಕೆ. ಅವರು ಎಲುಬಿನ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. “ವಯಸ್ಸಾದಂತೆ ಎಲುಬುಗಳು ಸವೆಯುವುದು ಮತ್ತು ಸಾಂದ್ರತೆ ಕಡಿಮೆಯಾಗುವುದು ಸಹಜ. ಆದರೆ ನಾವು ದಿನನಿತ್ಯ ಸೇವಿಸುವ ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡರೆ, ಎಲುಬಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವ ಮೂಲಕ ಯಾವುದೇ ಔಷಧಿಗಳ ನೆರವಿಲ್ಲದೆ ಮೂಳೆಗಳನ್ನು ಸದೃಢವಾಗಿಡಲು ಸಾಧ್ಯ. ಇಂತಹ ತಪಾಸಣಾ ಶಿಬಿರಗಳು ನಮ್ಮ ದೇಹದ ಎಲುಬಿನ ಸ್ಥಿತಿಗತಿಯನ್ನು ತಿಳಿಯಲು ಪೂರಕವಾಗಿವೆ,” ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರು ಶುಭ ಹಾರೈಸಿದರು. ನಾಡೋಳಿ ಡಯಗ್ನಾಸ್ಟಿಕ್ ಸೆಂಟರ್ನ ಮಾಲಕ ಹಾಗೂ ಜೇಸಿಐ ವಲಯ 15ರ ಉಪಾಧ್ಯಕ್ಷ ಕಾಶೀನಾಥ್ ಗೋಖಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜೇಸಿ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದನಾರ್ಪಣೆ ಮಾಡಿದರು. ಪಂಚಮಿ ಗೋಗಟೆ ಹಾಗೂ ಎಲಿಝಬೆತ್ ಜೇಮ್ಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಶಿಬಿರದಲ್ಲಿ ಕಡಬ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿ, ತಮ್ಮ ಎಲುಬು ಖನಿಜ ಸಾಂದ್ರತೆಯನ್ನು ಪರೀಕ್ಷಿಸಿಕೊಂಡು ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದರು.
