ರಾಮಕುಂಜ: ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ: ನಾಲ್ವರ ವಿರುದ್ದ FIR ದಾಖಲು

kadaba times

ರಾಮಕುಂಜದ ಕುಂಡಡ್ಕದಲ್ಲಿ ಹಣಕಾಸಿನ ವಿಚಾರಕ್ಕಾಗಿ ಅಬ್ದುಲ್ ಖಾದರ್ ಎಂಬವರ ಮೇಲೆ ನಾಲ್ವರು ವ್ಯಕ್ತಿಗಳು ಮರದ ಸಲಾಕೆ ಹಾಗೂ ಕುರ್ಚಿಯಿಂದ ಹಲ್ಲೆ ನಡೆಸಿದ್ದಾರೆ. ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು.

kadaba times
uniq

ಕಡಬ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಮಾತುಕತೆಗೆಂದು ಬರಹೇಳಿ, ಅವರ ಮೇಲೆ ಮರದ ಸಲಾಕೆ ಹಾಗೂ ಪ್ಲಾಸ್ಟಿಕ್ ಕುರ್ಚಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ರಾಮಕುಂಜ ಗ್ರಾಮದ ಕುಂಡಡ್ಕದಲ್ಲಿ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸವಣೂರು ಚಾಪಳ್ಳಿ ನಿವಾಸಿ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ.

ನಡೆದಿದ್ದೇನು?:  ನವೆಂಬರ್ 15ರಂದು ಸಂಜೆ ಅಬ್ದುಲ್ ಖಾದರ್ ಅವರು ಕೊಯಿಲದಲ್ಲಿದ್ದಾಗ, ಅವರ ಪರಿಚಯದ ಕೃಷ್ಣಪ್ಪ ಎಂಬವರು ಫೋನ್ ಮಾಡಿ ರಾಮಕುಂಜ ಗ್ರಾಮದ ಕುಂಡಡ್ಕದ ಕೇಶದ ಎಂಬವರ ಮನೆಯ ಬಳಿ ಬರುವಂತೆ ತಿಳಿಸಿದ್ದರು. ಅದರಂತೆ ಅಬ್ದುಲ್ ಖಾದರ್ ಅವರು ತಮ್ಮ ಪರಿಚಯದ ಸಂದೇಶ ಎಂಬವರೊಂದಿಗೆ ಸ್ಥಳಕ್ಕೆ ತೆರಳಿದ್ದರು.

kadaba times
kadaba times

ಅಬ್ದುಲ್ ಖಾದರ್ ಅವರು ಸ್ಥಳಕ್ಕೆ ತಲುಪುತ್ತಿದ್ದಂತೆ ಅಲ್ಲಿ ಹಾಜರಿದ್ದ ಗಂಗಾಧರ, ಆರೀಫ್, ಕೃಷ್ಣಪ್ಪ ಮತ್ತು ಸದಾಶಿವ ಎಂಬುವವರು ಅವರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಹಳೆಯ ಹಣಕಾಸಿನ ವಿಚಾರವನ್ನು ಮುಂದಿಟ್ಟುಕೊಂಡು ಆರೋಪಿಗಳು ತಗಾದೆ ತೆಗೆದಿದ್ದಾರೆ.

ಮಾತುಕತೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಗಂಗಾಧರ ಎಂಬವರು ಮರದ ಸಲಾಕೆಯಿಂದ ಅಬ್ದುಲ್ ಖಾದರ್ ಅವರ ತಲೆಯ ಹಿಂಬದಿಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಕೃಷ್ಣಪ್ಪ ಎಂಬವರು ಪ್ಲಾಸ್ಟಿಕ್ ಕುರ್ಚಿಯಿಂದ ತಲೆಯ ಮೇಲೆ ಹೊಡೆದರೆ, ಆರೀಫ್ ಮತ್ತು ಸದಾಶಿವ ಅವರು ಮುಖಕ್ಕೆ ಕೈಯಿಂದ ಗುದ್ದಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಸದಾಶಿವ ಅವರು ಬಟ್ಟೆಯಿಂದ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರುಗಟ್ಟಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಲ್ಲೆಯ ತೀವ್ರತೆಗೆ ಅಬ್ದುಲ್ ಖಾದರ್ ಅವರು ಚೀರಾಡಿದ್ದು, ಜೊತೆಯಲ್ಲಿದ್ದ ಸಂದೇಶ ಅವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಅಬ್ದುಲ್ ಖಾದರ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳು ಪ್ರಸ್ತುತ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಲ್ಲೆ ಪ್ರಕರಣದ ಕುರಿತು ಕಡಬ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Related Articles

Latest Articles