ಸುಳ್ಯದಲ್ಲಿ ಮೊಗೇರ ಸಂಸ್ಕೃತಿಯ ಸುವರ್ಣ ಪರ್ವ: ಮೊಗೇರ ದುಡಿ ಆಯನ -2026 |Mogera Dudi Ayana

kadaba times

ಫೆಬ್ರವರಿ 28 ರಿಂದ ಸುಳ್ಯದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ 50ನೇ ವರ್ಷದ ‘ಮೊಗೇರ ದುಡಿ ಆಯನ 2026’ ನಡೆಯಲಿದೆ. ಅದ್ದೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗಣ್ಯರ ಉಪಸ್ಥಿತಿಯ ಸಂಪೂರ್ಣ ವಿವರ ಇಲ್ಲಿದೆ.

kadaba times
uniq

ಸುಳ್ಯ:ಕರ್ನಾಟಕ ರಾಜ್ಯ ಮೊಗೇರ ಸಂಘದ (ರಿ.) ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಐತಿಹಾಸಿಕ ‘ಮೊಗೇರ ದುಡಿ ಆಯನ 2026’ ಸಮಾವೇಶವು ಸುಳ್ಯದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಸಮಾಜದ ಸಾಂಸ್ಕೃತಿಕ ಅಸ್ಮಿತೆಯನ್ನು ಜಗತ್ತಿಗೆ ಪರಿಚಯಿಸುವ ಈ ಮಹತ್ಕಾರ್ಯದ ಪೂರ್ವಸಿದ್ಧತೆಗಾಗಿ  ಪ್ರಮುಖರು ವಿವಿಧ ಮೊಗೇರ್ಕಳ ದೈವಸ್ಥಾನ,ಗ್ರಾಮಗಳ ಮನೆ ಮನೆಗೆ   ಭೇಟಿ ನೀಡುತ್ತಿದ್ದಾರೆ.

ಉದ್ಘಾಟನಾ ಸಮಾರಂಭ: ಫೆಬ್ರವರಿ 28ರ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ್ ಅವರು ವಹಿಸಲಿದ್ದು, ಸಂಘದ ಸ್ಥಾಪಕ ಸದಸ್ಯ ಗಣಪ ಕೆ. ಮೂಡುಶೆಡ್ಡೆ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮತ್ತೊಬ್ಬ ಸ್ಥಾಪಕ ಸದಸ್ಯ ಶುಭೋದಯ ಕೂಡ್ಲು ಅವರು ಸುವರ್ಣ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಅಭಯಕುಮಾರ್ ಅವರು ಪ್ರಸ್ತಾವಿಕ ಭಾಷಣದ ಮೂಲಕ ಸಮಾಜದ ಹಿನ್ನೆಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಲಿದ್ದಾರೆ.ಈ ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯರು ಮತ್ತು ಸಾಧಕರು ಸಾಕ್ಷಿಯಾಗಲಿದ್ದಾರೆ.

kadaba times
kadaba times

ಅದ್ದೂರಿ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಲಾ ಪ್ರದರ್ಶನ: ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬೆಳಿಗ್ಗೆ 10:00 ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ಶ್ರೀ ಚೆನ್ನಕೇಶವ ದೇವಸ್ಥಾನದವರೆಗೆ ಸಹಸ್ರಾರು ಸಂಖ್ಯೆಯ ಮೊಗೇರ ಬಾಂಧವರು ಪಾಲ್ಗೊಳ್ಳುವ ಬೃಹತ್ ಮೆರವಣಿಗೆ ನಡೆಯಲಿದೆ. ದುಡಿ ಕುಣಿತದ ತಾಳ, ಹುಲಿವೇಷದ ಅಬ್ಬರ, ಯಕ್ಷಗಾನದ ಗಾಂಭೀರ್ಯ, ಸಾಂಪ್ರದಾಯಿಕ ತಾಲೀಮು ಮತ್ತು ವಿವಿಧ ಗೊಂಬೆ ನೃತ್ಯಗಳ ಮೂಲಕ ಮೊಗೇರ ಸಂಸ್ಕೃತಿಯ ವೈಭವವನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಮಣ್ಣಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಾರ್ಥಕ ಪ್ರಯತ್ನ ಇದಾಗಲಿದೆ.

ಕಲಾತಂಡಗಳಿಗೆ ಮತ್ತು ಸಮಾಜದ ಬಂಧುಗಳಿಗೆ ಆಹ್ವಾನ: ಸಮಾವೇಶದಲ್ಲಿ ನಮ್ಮ ಹಳೆಯ ಸಾಂಪ್ರದಾಯಿಕ ಜನಪದ ಕಲೆಗಳಾದ ಪಾಡ್ದನ, ಜನಪದ ಸಂಗೀತ ಮತ್ತು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲು ಮೊಗೇರ ಸಮಾಜದ ಕಲಾತಂಡಗಳಿಗೆ ವೇದಿಕೆಯನ್ನು ಕಲ್ಪಿಸಲಾಗಿದೆ. ಆಸಕ್ತರು ತಮ್ಮ ಹೆಸರನ್ನು ಜನವರಿ 31, 2026ರ ಒಳಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಸಂಘಟನಾ ಸಮಿತಿಯ ಪ್ರಮುಖರಾದ ಮಂಜು ಸುಳ್ಯ, ಗುರುಚರಣ್ ಪೊಲಿಪು ಮತ್ತು ರಮೇಶ್ ಮೆಟ್ಟಿನಡ್ಕ ಅವರು ಈ ಸಾಂಸ್ಕೃತಿಕ ಪ್ರದರ್ಶನಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೊಗೇರ ಸಮಾಜದ ಈ ಸುವರ್ಣ ಕ್ರಾಂತಿಗೆ ಸಕಲ ಬಾಂಧವರೂ ಸಾಕ್ಷಿಯಾಗುವಂತೆ ಆಯೋಜಕರು ವಿನಂತಿಸಿದ್ದಾರೆ.

Related Articles

Latest Articles