
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥಬೀದಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಸೌಟಿನಿಂದ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಅನಧಿಕೃತ ಗೂಡಂಗಡಿಗಳ ಕಾಟ ಹಾಗೂ ಆಡಳಿತ ಮಂಡಳಿಯ ಮೌನದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ಮೇಲೆ ಸೌಟಿನಿಂದ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪವಿತ್ರ ಕ್ಷೇತ್ರವೊಂದರಲ್ಲಿ ನಡೆದ ಈ ದೈಹಿಕ ಹಲ್ಲೆಯ ಘಟನೆಯು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಜನವರಿ 2 ರಂದು ಈ ಘಟನೆ ನಡೆದಿದೆ ಎಂದು ವಿಡಿಯೋದಲ್ಲಿ ದಾಖಲಾಗಿದೆ. ರಥಬೀದಿಯ ವ್ಯಾಪಾರಿಯೊಬ್ಬರು ಮತ್ತೊಬ್ಬ ವ್ಯಕ್ತಿಯ ಮೇಲೆ ಅಡುಗೆ ಮಾಡುವ ದೊಡ್ಡ ಸೌಟಿನಿಂದ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಸುತ್ತಮುತ್ತ ನೂರಾರು ಭಕ್ತರು ಸಂಚರಿಸುತ್ತಿದ್ದರೂ, ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ ಈ ಕೃತ್ಯ ಎಸಗಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯುದ್ದಕ್ಕೂ ಇತ್ತೀಚಿನ ದಿನಗಳಲ್ಲಿ ಅನಧಿಕೃತ ಗೂಡಂಗಡಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಮಿತಿಮೀರಿದೆ. ಇದು ಕೇವಲ ಭಕ್ತರ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಮಾತ್ರವಲ್ಲದೆ, ಕ್ಷೇತ್ರದ ಶಿಸ್ತು ಮತ್ತು ಭದ್ರತೆಗೂ ಸವಾಲಾಗಿದೆ. ಈ ಅಂಗಡಿಗಳ ಮಾಲೀಕರ ವರ್ತನೆಯಿಂದಾಗಿ ದೂರದ ಊರುಗಳಿಂದ ಬರುವ ಭಕ್ತರು ಮುಜುಗರ ಮತ್ತು ಕಿರಿಕಿರಿ ಅನುಭವಿಸುವಂತಾಗಿದೆ.


ಇಷ್ಟೆಲ್ಲಾ ಗದ್ದಲಗಳು ನಡೆಯುತ್ತಿದ್ದರೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಏಕೆ? ಎಂಬ ಪ್ರಶ್ನೆ ಭಕ್ತವಲಯದಲ್ಲಿ ಎದ್ದಿದೆ. ರಥಬೀದಿಯಲ್ಲಿ ಭದ್ರತಾ ಸಿಬ್ಬಂದಿಯ ನಿಯೋಜನೆ ಇಲ್ಲದಿರುವುದು ಏಕೆ?,ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂಜರಿಯುತ್ತಿರುವುದು ಯಾಕೆ?, ಹಲ್ಲೆ ನಡೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆಡಳಿತದ ವೈಫಲ್ಯವಲ್ಲವೇ ?್ಎಂದು ನಾಗರಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
“ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಸುರಕ್ಷತೆಯ ಭಾವನೆ ಇರಬೇಕು. ಇಂತಹ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ರಥಬೀದಿಯಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ, ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕು” ಎಂದು ಭಕ್ತರು ಮತ್ತು ಸ್ಥಳೀಯ ಹಿತರಕ್ಷಣಾ ವೇದಿಕೆಗಳು ಆಗ್ರಹಿಸಿದ್ದಾರೆ.
