
ನೆಲ್ಯಾಡಿ: ಯಾವುದೇ ಪರವಾನಿಗೆ ಇಲ್ಲದೆ ಲಾರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮರದ ದಿಮ್ಮಿಗಳು, ಲಾರಿ ಹಾಗೂ ಚಾಲಕನನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.


ಜ.8ರಂದು ಮುಂಜಾನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಂಗಳೂರು ಸೋಮೇಶ್ವರ ನಿವಾಸಿ ರಫೀಕ್ ಬಂಧಿತ ಲಾರಿ ಚಾಲಕ.
ಘಟನೆಯ ವಿವರ: ಆರೋಪಿ ರಫೀಕ್ ಸಕಲೇಶಪುರದಿಂದ ಮಂಗಳೂರು ಕಡೆಗೆ ಹತ್ತು ಚಕ್ರದ ಲಾರಿಯಲ್ಲಿ ವಿವಿಧ ಕಾಡು ಜಾತಿಯ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಬರುತ್ತಿದ್ದನು. ಮಣ್ಣಗುಂಡಿ ಬಳಿ ಲಾರಿಯನ್ನು ತಡೆದು ತಪಾಸಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಕಾನೂನುಬದ್ಧ ಪರವಾನಿಗೆ ಪತ್ರಗಳು ಲಭ್ಯವಾಗಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಲಾರಿಯಲ್ಲಿದ್ದ 192 ಮರದ ದಿಮ್ಮಿಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದಾರೆ.


ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ: ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯತೀಂದ್ರ, ವಿನಯಚಂದ್ರ, ಪ್ರವೀಣ್, ಅರಣ್ಯ ರಕ್ಷಕರಾದ ವಿನಯಚಂದ್ರ ಆಳ್ವ, ಶಿವಾನಂದ ಕುದ್ರಿ, ಜಗದೀಶ್, ಅರಣ್ಯ ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್ ಸೊಣಂದೂರು, ದಿನೇಶ್ ಗೌಡ ಹಾಗೂ ಚಾಲಕ ಕೊಶೀರ್ ಪಾಲ್ಗೊಂಡಿದ್ದರು. ಅರಣ್ಯ ಇಲಾಖೆಯು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.
