
ನೆಲ್ಯಾಡಿ ಕಟ್ಟೆಮಜಲಿನಲ್ಲಿ ನೇಮೋತ್ಸವದ ವೇಳೆ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಚಂದ್ರಶೇಖರನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ


ನೆಲ್ಯಾಡಿ: ಗ್ರಾಮದ ಕಟ್ಟೆಮಜಲು ಎಂಬಲ್ಲಿ ನೇಮೋತ್ಸವ ವೀಕ್ಷಿಸಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ಚಂದ್ರಶೇಖರ ಕಟ್ಟೆಮಜಲು ಬಂಧಿತ ಆರೋಪಿ.
ಘಟನೆಯ ವಿವರ: ಜನೆವರಿ 3ರಂದು ರಾತ್ರಿ ನೆಲ್ಯಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ನೇಮೋತ್ಸವ ಜರುಗುತ್ತಿತ್ತು. ಈ ವೇಳೆ ಬಾಲಕಿಯು ತನ್ನ ಕುಟುಂಬದವರೊಂದಿಗೆ ದೈವದ ನೇಮ ವೀಕ್ಷಿಸಲು ತೆರಳಿದ್ದಳು. ಜನೆವರಿ 4ರಂದು ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಬಾಲಕಿಯು ಬಹಿರ್ದೇಶೆಗೆಂದು ತೆರಳುತ್ತಿದ್ದಾಗ, ಹೊಂಚು ಹಾಕಿದ್ದ ಚಂದ್ರಶೇಖರ ಆಕೆಯನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ.


ಘಟನೆಯಿಂದ ಆಘಾತಕ್ಕೊಳಗಾದ ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
