
ಸರ್ಕಾರದಿಂದ ಸಿಗುವ ವಿವಿಧ ಸಾಲ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಪ.ಜಾ/ಪ.ಪಂಗಡದವರು ಆರ್ಥಿಕವಾಗಿ ಮುಂದೆ ಬರಬೇಕು, ದುಶ್ಚಟಗಳಿಂದ ದೂರವಿರಬೇಕು.ಕಾಲನಿ ನಿವಾಸಿಗಳು ಇರುವ ಸಮಯದಲ್ಲಿ ಭೇಟಿ ನೀಡಿ ಅಥವಾ ಬೀಟ್ ಪೊಲೀಸರ ಮೂಲಕ ಕಾಲನಿಯಲ್ಲಿ ಜಾಗೃತಿ ಮೂಡಿಸಲಾಗುವುದು -ಎಸ್.ಐ ಜಂಬೂರಾಜ್ ಮಹಾಜನ್


ಕಡಬ: ಹೊಸದಾಗಿ ಘೋಷಣೆಯಾದ ಬೆಳ್ತಂಗಡಿ ಪೊಲೀಸ್ ಉಪ ವಿಭಾಗಕ್ಕೆ ಕಡಬ ಠಾಣಾ ವ್ಯಾಪ್ತಿಯನ್ನು ಸೇರಿಸಿರುವುದಕ್ಕೆ ಕಡಬ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಡಿ.21 ರಂದು ಕಡಬ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಈ ವಿಚಾರ ಸುದೀರ್ಘ ಚರ್ಚೆಯಾಯಿತು. ಬೆಳ್ತಂಗಡಿ ಪೊಲೀಸ್ ಉಪ ವಿಭಾಗವು ಹೊಸದಾಗಿ ಘೋಷಣೆಯಾಗಿದ್ದು, ಸಿ.ಕೆ. ರೋಹಿಣಿ ಅವರು ಈ ಉಪ ವಿಭಾಗದ ಮೊದಲ ಡಿವೈಎಸ್ಪಿ (DySP) ಆಗಿ ನೇಮಕಗೊಂಡಿದ್ದಾರೆ. ಕಡಬ ಸಹಿತ ಇತರ ಐದು ಠಾಣೆಗಳು ಈ ವ್ಯಾಪ್ತಿಗೆ ಬರಲಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಸಭೆಯಲ್ಲಿದ್ದವರು ನಮಗೆ ಹತ್ತಿರ ವಿರುವ ಪುತ್ತೂರು ಉಪ ವಿಭಾಗವೇ ಸೂಕ್ತ , ಶಾಂತಿ ಮೊಗರು ಮೂಲಕ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ, ದೂರದ ಬೆಳ್ತಂಗಡಿಗೆ ಓಡಾಡುವುದು ಜನಸಾಮಾನ್ಯರಿಗೆ ಅಸಾಧ್ಯ. ಆದ್ದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು” ಎಂದು ಮುಖಂಡ ಆನಂದ ಬೆಳ್ಳಾರೆ ಆಗ್ರಹಿಸಿದರು.

ಕೋಳಿ ಅಂಕ ಸಹಿತ ಅಕ್ರಮ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿ: ಠಾಣಾ ವ್ಯಾಪ್ತಿಯಲ್ಲಿ ಕೋಳಿ ಅಂಕಕ್ಕೆ ಅವಕಾಶವೇ ಇರುವುದಿಲ್ಲ, ಅಕ್ರಮ ಚಟುವಟಿಕೆಯ ಬಗ್ಗೆ ಮಾಹಿತಿ ಇದ್ದರೆ ನೇರವಾಗಿ ನನ್ನೊಂದಿಗೆ ಹಂಚಿಕೊಳ್ಳಬಹುದು. 9480805364 ಸಂಖ್ಯೆಗೆ ಕರೆ ಮಾಡಿ ಮಾಡಬಹುದು. ಕಾನೂನು ರೀತಿಯಲ್ಲಿ ಹದ್ದು ಬಸ್ತಿನಲ್ಲಿ ಇಡಲು ಪೊಲೀಸ್ ಇಲಾಖೆ ಬದ್ದವಾಗಿದೆ ಎಂದರು.


10 ಗಂಟೆಗೆ ಧ್ವನಿ ವರ್ಧಕ ಬಂದ್: ಅಲ್ಲಲ್ಲಿ ಸಂಪ್ರದಾಯಿಕೆವಾಗಿ ನಡೆದುಕೊಂಡು ಬಂದಿರುವ ನೇಮೋತ್ಸವಗಳು ರಾತ್ರಿಯಿಂದ ಮುಂಜಾನೆಯವರೆಗೂ ನಿರಂತರವಾಗಿ ನಡೆಯುತ್ತಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕ ಬಳಸಲು ಅವಕಾಶ ಬೇಕೆಂದು ಸಭೆಯಲ್ಲಿ ಚರ್ಚೆಗೆ ಬಂತು. ಈ ವೇಳೆ ಉತ್ತರಿಸಿದ ಎಸ್.ಐ ಅವರು ನಾವು ಕಾನೂನು ಮೀರಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಸರ್ಕಾರದ ಸೂಚನೆಯನ್ನು ಪಾಲಿಸಬೇಕು, ಯಾವುದೇ ಕಾರ್ಯಕ್ರಮವಿದ್ದರೂ ನಿಯಮ ಪಾಲಿಸಬೇಕು, ರಾತ್ರಿ ಹತ್ತರ ಬಳಿಕ ಧ್ವನಿವರ್ಧಕ ರಹಿತ ಕಾರ್ಯಕ್ರಮ ಮುಂದುವರಿಸಿ ನಮ್ಮ ಅಭ್ಯಂತರವಿಲ್ಲವೆಂದರು .
ಸಿಸಿ ಟಿವಿ ಹೊಂದಿರುವವರು ಇಲಾಖೆಗೆ ಸಹಕಾರ ನೀಡಬೇಕು: ರಾಮಕುಂಜದಲ್ಲಿ ಸಿಸಿ ಟಿವಿಯ ಅಗತ್ಯ ಬಗ್ಗೆ ಕೇಶವ ಗಾಂಧಿ ಪೇಟೆ ಪ್ರಸ್ತಾಪಿಸಿದರು, ಇದಕ್ಕೆ ಪೂರಕವಾಗಿ ಮಾತನಾಡಿದ ತಿಮ್ಮಪ್ಪ ವಿ.ಕೆ ಅವರು ಆಲಂಕಾರಿನ ಅಂಗನವಾಡಿಯಿಂದ ಕಳ್ಳತನವಾದರೂ ಇದುವರೆಗೆ ಪತ್ತೆಯಾಗಿಲ್ಲ, ಅಂಗಡಿ ವರ್ತಕರ ಸಿಸಿಟಿವಿಗಳು ರಸ್ತೆಗೆ ಕವರ್ ಆಗಲ್ಲ, ಕೋಡಿಂಬಾಳದಲ್ಲೂ ಸಿಸಿ ಟಿವಿಯ ಅಗತ್ಯವಿದೆ ಎಂದರು. ಇದಕ್ಕೆ ಉತ್ತರಿಸಿದ ಎಸ್.ಐ ಅವರು ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸುವ ಬಗ್ಗೆ ಸ್ಥಳೀಯ ಸಂಘ ಸಂಸ್ಥೆ , ಸ್ಥಳೀಯಾಡಳಿತಕ್ಕೆ ಮನವಿ ಮಾಡಲಾಗಿದೆ . ಅಲ್ಲದೆ ಕಡಬ ಮುಖ್ಯ ಪೇಟೆಯಲ್ಲಿ ಇಲಾಖೆ ವತಿಯಿಂದ ಅಳವಡಿಸಿರುವ ಕ್ಯಾಮಾರಗಳು ಕಾರ್ಯನಿರ್ವಹಿಸುತ್ತಿಲ್ಲ, ಅವುಗಳ ನಿರ್ವಹಣೆ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಸಭೆಯಲ್ಲಿ ಮುಖಂಡರುಗಳಾದ ಶಶಿಧರ ಬೊಟ್ಟಡ್ಕ, ಆನಂದ ಬೆಳ್ಳಾರೆ, ಆನಂದ ಪಡುಬೆಟ್ಟು, ಉಮೇಶ್ ಕೋಡಿಂಬಾಳ, ವಸಂತ ಕುಬುಲಾಡಿ, ಸತೀಶ್ ಪಳಿಕೆ, ಹರ್ಷ ಕೋಡಿ,ಯಶೋಧರ ,ತಿಮ್ಮಪ್ಪ ವಿ.ಕೆ, ಕೇಶವ ಗಾಂಧಿ ಪೇಟೆ ಹಾಜರಿದ್ದರು.
