
ಕಡಬ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೊಂದ ವ್ಯಕ್ತಿಯೊಬ್ಬರು ತನ್ನ ಮನೆಯ ರಬ್ಬರ್ ತೋಟದಲ್ಲಿ ನೇಣಿಗೆ ಶರಣಾದ ಘಟನೆ ಕೊಂಬಾರು ಗ್ರಾಮದಿಂದ ವರದಿಯಾಗಿದೆ.


ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಶೇಖರ ಗೌಡ ಆತ್ಮಹತ್ಯೆಗೆ ಶರಣಾದವರು.
ಪತ್ನಿ ಸುಮಾರು 4 ತಿಂಗಳ ಹಿಂದೆ ಮೈಗೆ ಬೆಂಕಿ ತಾಗಿ ಚಿಕಿತ್ಸೆ ಪಡೆದರೂ ಇನ್ನು ಸರಿಯಾಗಿ ಗುಣ ಮುಖರಾಗಿರುವುದಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಬೇಸರಗೊಂಡು ಹೆಚ್ಚಾಗಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.


ಅ.12 ರ ರಾತ್ರಿ ಮೃತರ ಮಗ ರಾತ್ರಿ ಊಟ ಮಾಡಿ ಮಲಗಿ ಸುಮಾರು 11-30 ಗಂಟೆ ಸಮಯಕ್ಕೆ ಹೊರಗೆ ಬಂದಾಗ ತಂದೆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಹುಡುಕಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಮನೆಯ ಎದುರು ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಈ ಬಗ್ಗೆ ಮೃತರ ಮಗ ಜಯಂತ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ 30/2025 ಕಲಂ:194 BNSS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.
