
ಸುಬ್ರಹ್ಮಣ್ಯ : ಪ್ರಸಿದ್ಧ ನಾಗದೇವರ ಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರದಂದು ಭಕ್ತರ ದಂಡು ಕಂಡುಬಂತು.


ಶಾಲಾ ರಜೆಗಳು , ಎರಡನೇ ಶನಿವಾರದ ಸುದೀರ್ಘ ವಾರಾಂತ್ಯದ ಪ್ರಯೋಜನ ಪಡೆದುಕೊಂಡ ಸಾವಿರಾರು ಜನರು ವಿವಿಧೆಡೆಯಿಂದ ಆಗಮಿಸಿ, ಕುಕ್ಕೆ ದೇವರ ದರ್ಶನ ಪಡೆದರು.
ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದೃಶ್ಯಗಳು ಕಂಡುಬಂದವು.ನೆಟ್ಟಣಕ್ಕೆ ಆಗಮಿಸಿದ ರೈಲು ಮತ್ತು ಸುಬ್ರಹ್ಮಣ್ಯ ಕ್ಕೆ ಆಗಮಿಸಿದ ಬಸ್ಸುಗಳು ಸಂಪೂರ್ಣವಾಗಿ ಭಕ್ತರಿಂದ ತುಂಬಿದ್ದವು.
ಸುಬ್ರಹ್ಮಣ್ಯದಲ್ಲಿ ಭಾನುವಾರ ಮಧ್ಯಾಹ್ನ ಭೋಜನ ವ್ಯವಸ್ಥೆ ಸರಾಗವಾಗಿ ನಡೆದಿದೆ. ಕುಮಾರಧಾರ ಪವಿತ್ರನದಿ ತೀರದಲ್ಲೂ ಭಕ್ತರ ತೀರ್ಥಸ್ನಾನ ದೃಶ್ಯಗಳು ಹೆಚ್ಚಾಗಿತ್ತು.


ಪಾರ್ಕಿಂಗ್ ಸ್ಥಳಗಳು ತುಂಬಿ ಹೋಗಿರುವುದರಿಂದ, ಭಕ್ತರ ವಾಹನಗಳನ್ನು ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಲಾಗಿತ್ತು. ಎಲ್ಲೆಡೆ ಭಕ್ತರ ಪ್ರವಾಹವೇ ಕಾಣಸಿಕ್ಕಿತು. ದೇವಳದ ಆಡಳಿತ ಮಂಡಳಿ, ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೂ ಸಹಕಾರ ನೀಡಿ ಸಮರ್ಪಕ ನಿರ್ವಹಣೆ ಮಾಡಿದೆ.
ಶನಿವಾರದಿಂದಲೇ ಕ್ಷೇತ್ರದ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದು, ಖಾಸಗಿ ವಸತಿಗೃಹಗಳಿಗೂ ಭಕ್ತರು ಆಗಮಿಸಿದ ಕಾರಣ ಬಹುತೇಕ ಭರ್ತಿಯಾಗಿದ್ದವು.
