
ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸುಮಾರು ₹604 ಕೋಟಿ ವೆಚ್ಚದ ಬೃಹತ್ ಮಾಸ್ಟರ್ ಪ್ಲಾನ್ ಯೋಜನೆ ಪ್ರಸ್ತುತ ಅಂತಿಮ ಟೆಂಡರ್ ಹಂತದಲ್ಲಿದೆ ಎಂದು ಮಾಸ್ಟರ್ ಪ್ಲಾನ್ ಸಮಿತಿ ಸ್ಪಷ್ಟಪಡಿಸಿದೆ. ದೇವಾಲಯದ ಆಡಳಿತ ಕಚೇರಿಯಲ್ಲಿ ನವೆಂಬರ್ 1 ರಂದು ಪತ್ರಿಕಾಗೋಷ್ಠಿ ನಡೆಸಿದ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಶಿವರಾಮ ರೈ ಹಾಗೂ ಪವನ್ ಎಂ.ಡಿ. ಅವರು, ಇತ್ತೀಚೆಗೆ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಮಾಡಿರುವ ಆರೋಪಗಳನ್ನು ಕಟುವಾಗಿ ಖಂಡಿಸಿದ್ದಲ್ಲದೆ, ಹಿಂದಿನ ಆಡಳಿತಾವಧಿಯಲ್ಲಿ ನಡೆದ ಕಾಮಗಾರಿ ರದ್ದು ಹಾಗೂ ಅವ್ಯವಹಾರಗಳನ್ನು ಮುನ್ನೆಲೆಗೆ ತಂದು ತಿರುಗೇಟು ನೀಡಿದ್ದಾರೆ.

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾಗಿರುವ ₹604 ಕೋಟಿ ಮೊತ್ತದ 3ನೇ ಹಂತದ ಮಾಸ್ಟರ್ ಪ್ಲಾನ್ ಯೋಜನೆಯು ಈಗಾಗಲೇ ಟೆಂಡರ್ ಹಂತಕ್ಕೆ ತಲುಪಿದೆ ಎಂದು ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿ ಪ್ರಕಟಿಸಿದೆ.
ದೇವಾಲಯದ ಆಡಳಿತ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಸದಸ್ಯರು, ಇತ್ತೀಚೆಗೆ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಹಾಗೂ ಇತರರು ಸಮಿತಿಯ ಕಾರ್ಯವೈಖರಿ ಕುರಿತು ಮಾಡಿರುವ ಆಧಾರರಹಿತ ಆರೋಪಗಳನ್ನು ಕಟುವಾಗಿ ತಳ್ಳಿಹಾಕಿದರು.
ಒಂದು ತಿಂಗಳಲ್ಲಿ ಟೆಂಡರ್ ಪೂರ್ಣ – ಕಾಮಗಾರಿ ಆರಂಭ: ಸತೀಶ್ ಕೂಜುಗೋಡು

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು, “ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು, ಈ ಅವಧಿಯಲ್ಲಿ 4 ಮಹತ್ವದ ಸಭೆಗಳನ್ನು ನಡೆಸಿ ಕ್ಷೇತ್ರದ ಹಿತದೃಷ್ಟಿಯಿಂದ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಸುಮಾರು ₹604 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಯೋಜನೆ ಅಂತಿಮ ಟೆಂಡರ್ ಹಂತದಲ್ಲಿದೆ. ಮುಂದಿನ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಲಿವೆ. ಈಗಾಗಲೇ ಅಗತ್ಯವಿರುವೆಡೆ ಗೋಶಾಲೆ, ಭವನ ಹಾಗೂ ಇಂಟರ್ ಲಾಕ್ ಅಳವಡಿಕೆ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸನ್ನ ದರ್ಬೆ ಅವರು ವಾಸ್ತವಾಂಶಗಳನ್ನು ವಿಮರ್ಶಿಸದೆ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಹಿಂದಿನ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿದ ಅವರು, “ನಿತ್ಯಾನಂದ ಮುಂಡೋಡಿ ಅವರ ಆಡಳಿತಾವಧಿಯಲ್ಲಿ ದೇವಾಲಯದ ಸುತ್ತು ಪೌಳಿ ನಿರ್ಮಾಣಕ್ಕೆ ₹14 ಕೋಟಿಯ ಪ್ರಸ್ತಾವನೆ ಸಿದ್ಧವಾಗಿ ಟೆಂಡರ್ ಆಗಿತ್ತು. ಆದರೆ ನಂತರ ಬಂದ ಮೋಹನ್ ರಾಮ್ ಸುಳ್ಳಿ ಆಡಳಿತ ಮಂಡಳಿ ಅದನ್ನು ಮುಂದುವರಿಸದೆ ರದ್ದುಗೊಳಿಸಿತು. ಇಂದು ಅದೇ ಕಾಮಗಾರಿಯನ್ನು ₹52 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಬೇಕಾದ ದುಸ್ಥಿತಿ ಬಂದಿದೆ. ಈ ವಿಳಂಬದಿಂದ ದೇವಸ್ಥಾನದ ಬೊಕ್ಕಸಕ್ಕೆ ಆದ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಯಾರು ಹೊಣೆ ಎಂಬುದನ್ನು ಪ್ರಸನ್ನ ದರ್ಬೆ ಸ್ಪಷ್ಟಪಡಿಸಬೇಕು. ಕೇವಲ ರಸ್ತೆ ಬದಿ ಗಿಡಗಳನ್ನು ನೆಟ್ಟು ₹3,000 ಟ್ರೀ ಗಾರ್ಡ್ ಮಾಡಿದ್ದನ್ನು ಬಿಟ್ಟರೆ ಅವರ ಅವಧಿಯಲ್ಲಿ ಬೇರೇನೂ ಆಗಿಲ್ಲ” ಎಂದು ಆರೋಪಿಸಿದರು.

ತಮ್ಮ ಅವಧಿಯಲ್ಲಿ ಸಭೆಯನ್ನೇ ಮಾಡದವರು ಈಗ ಮಾತನಾಡುತ್ತಿದ್ದಾರೆ: ಪವನ್ ಎಂ.ಡಿ.
ಸಮಿತಿ ಸದಸ್ಯ ಪವನ್ ಎಂ.ಡಿ. ಮಾತನಾಡಿ, “ಪ್ರಸನ್ನ ದರ್ಬೆ ಅವರು ವ್ಯವಸ್ಥಾಪನಾ ಸಮಿತಿಯಲ್ಲಿದ್ದಾಗ ಮಾಸ್ಟರ್ ಪ್ಲಾನ್ ಕುರಿತು ಒಂದೇ ಒಂದು ಅಧಿಕೃತ ಸಭೆಯನ್ನೂ ಆಯೋಜಿಸಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಂದಿಗೂ ಅನುಷ್ಠಾನಗೊಳ್ಳದ ₹500 ಕೋಟಿಯ ಅವಾಸ್ತವಿಕ ಯೋಜನೆಯನ್ನು ಅವರು ಹೇಗೆ ರೂಪಿಸಿದ್ದರು? ಈಗಿನ ಸಮಿತಿ ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿರುವಾಗ ಅಪಪ್ರಚಾರ ಮಾಡುವುದು ಸರಿಯಲ್ಲ” ಎಂದು ಪ್ರಶ್ನಿಸಿದರು.
ಬಿಜೆಪಿ ಜನಪ್ರತಿನಿಧಿಗಳ ನಿರ್ಲಕ್ಷ್ಯ – ಶಿವರಾಮ ರೈ ವಾಗ್ದಾಳಿ:
ಕಡಬ ಕೆಡಿಪಿ ಸದಸ್ಯ ಶಿವರಾಮ ರೈ ಮಾತನಾಡಿ, “ದೇವಾಲಯದ ಪೂರ್ವ ಬಾಗಿಲಿನ ಹೊರಭಾಗದಲ್ಲಿ ನೂತನ ಸೇತುವೆ ನಿರ್ಮಿಸಿ ಭಕ್ತರ ಸುಗಮ ಪ್ರವೇಶಕ್ಕೆ ಟೆಂಡರ್ ಆಗಿ ತಡೆಗೋಡೆ ನಿರ್ಮಾಣವಾಗಿತ್ತು. ಆದರೆ ಅದನ್ನು ಉದ್ದೇಶಪೂರ್ವಕವಾಗಿ ತಡೆದು ಕ್ಷೇತ್ರದ ಬೆಳವಣಿಗೆಗೆ ಅಡ್ಡಿಪಡಿಸಲಾಯಿತು. ಗೋಶಾಲೆಯ ಜಮೀನಿಗೆ ಆರ್‌ಟಿಸಿ (RTC) ಮಾಡಿಸುವಲ್ಲೂ ಹಿಂದಿನವರು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯ 7 ಜನ ಶಾಸಕರು ಹಾಗೂ ಓರ್ವ ಎಂಎಲ್‌ಸಿ ಇದ್ದರೂ ಸುಬ್ರಹ್ಮಣ್ಯದ 3ನೇ ಹಂತದ ಮಾಸ್ಟರ್ ಪ್ಲಾನ್ ವಿಳಂಬದ ಬಗ್ಗೆ ವಿಧಾನಮಂಡಲದಲ್ಲಿ ಚಕಾರವೆತ್ತದೆ ಬೇಜವಾಬ್ದಾರಿತನ ತೋರಿದ್ದಾರೆ. ನಿತ್ಯಾನಂದ ಮುಂಡೋಡಿ ಅವರ ಅವಧಿಯಲ್ಲಿ ಪ್ರತ್ಯೇಕ ಸರ್ಪ ಸಂಸ್ಕಾರದ ವ್ಯವಸ್ಥೆ ರೂಪಿಸಲಾಗಿದ್ದರೂ, ಅದನ್ನು ರದ್ದುಗೊಳಿಸಿ ಈಗ ತಪ್ಪು ಮಾಹಿತಿ ಹರಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಲೋಲಾಕ್ಷ ಕೈಕಂಬ ಹಾಗೂ ಅಚ್ಚುತ ಗೌಡ ಉಪಸ್ಥಿತರಿದ್ದರು
