
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಕರಿಕ್ಕಳ–ನಿಂತಿಕಲ್ಲು ರಸ್ತೆಯ ಮುಚ್ಚಿಲ ಎಂಬಲ್ಲಿ ಮುಂಭಾಗದ ಕಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರು ಹಠಾತ್ತನೆ ಸಡನ್ ಬ್ರೇಕ್ ಹಾಕಿದ ಪರಿಣಾಮ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಶಾಸಕಿ ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಸುಳ್ಯ / ನಿಂತಿಕಲ್ಲು:ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಚರಿಸುತ್ತಿದ್ದ ಕಾರು ಕರಿಕ್ಕಳ ಮತ್ತು ನಿಂತಿಕಲ್ಲು ನಡುವಿನ ಮುಚ್ಚಿಲ ಎಂಬಲ್ಲಿ ರಸ್ತೆ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಶಾಸಕಿಯವರು ಹಾಗೂ ಚಾಲಕ ಸುರಕ್ಷಿತವಾಗಿ ಪಾರಾಗಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕರಿಕ್ಕಳ–ನಿಂತಿಕಲ್ಲು ಮಾರ್ಗದ ಮುಚ್ಚಿಲ ಎಂಬಲ್ಲಿ ಶಾಸಕರ ಕಾರಿನ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಚಾಲಕ ಏಕಾಏಕಿ ಸಡನ್ ಬ್ರೇಕ್ ಹಾಕಿದ್ದಾನೆ.


ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಶಾಸಕರ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಮುಂದಿನ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಾಸಕಿಯವರು ಸಂಚರಿಸುತ್ತಿದ್ದ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ.
ಬೇರೆ ವಾಹನದಲ್ಲಿ ಪ್ರಯಾಣ:ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳದಲ್ಲಿದ್ದವರು ಆತಂಕಗೊಂಡರಾದರೂ, ಕಾರಿನಲ್ಲಿದ್ದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅವರ ವಾಹನ ಚಾಲಕ ಪಾರಾಗಿದ್ದಾರೆ.ಅಪಘಾತದ ಬಳಿಕ ಶಾಸಕರು ಸ್ಥಳಕ್ಕೆ ಆಗಮಿಸಿದ ಬೇರೊಂದು ವಾಹನದ ಮೂಲಕ ತಮ್ಮ ನಿವಾಸಕ್ಕೆ ಪ್ರಯಾಣ ಬೆಳೆಸಿದರು.
