ಸುಬ್ರಹ್ಮಣ್ಯ ಗ್ರಾ.ಪಂ:ಮನೆ ಪಕ್ಕ ತೋಡಿದ್ದ ಚರಂಡಿ ಗುಂಡಿ ಮುಚ್ಚಿದ ಸ್ಥಳೀಯಾಡಳಿತ

kadaba times

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆಯಲ್ಲಿ ಬಾಬು ಎಂಬವರ ಮನೆಯ ಗೋಡೆಯ ಅಂಚಿನಲ್ಲೇ ಚರಂಡಿ ನಿರ್ಮಾಣಕ್ಕಾಗಿ ದೊಡ್ಡ ಹೊಂಡ ತೆಗೆದು ತಿಂಗಳು ಕಳೆದರೂ ಕಾಮಗಾರಿ ಮಾಡದೆ ಹಾಗೇ ಬಿಡಲಾಗಿತ್ತು. ಇದರಿಂದ ಮನೆ ಕುಸಿಯುವ ಭೀತಿ ಎದುರಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣ, ಮೇಲಧಿಕಾರಿಗಳ ಗಮನ ಹಾಗೂ ‘ಕಡಬ ಟೈಮ್ಸ್’ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯಾಡಳಿತವು ಹೊಂಡವನ್ನು ಮುಚ್ಚುವ ಮೂಲಕ ಸೂಕ್ತ ಕ್ರಮ ಕೈಗೊಂಡಿದೆ.

kadaba times
uniq

ಕುಕ್ಕೆ ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎಂಬಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ಮನೆಯ ಗೋಡೆಯ ಪಕ್ಕದಲ್ಲೇ ಚರಂಡಿ ಕಾಮಗಾರಿಗಾಗಿ ದೊಡ್ಡ ಹೊಂಡ ತೋಡಿ, ಹಲವು ವಾರಗಳಿಂದ ಯಾವುದೇ ಕಾಮಗಾರಿ ಮುಂದುವರಿಸದೆ ನಿರ್ಲಕ್ಷ್ಯ ವಹಿಸಿದ್ದ ಪ್ರಕರಣಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಕುರಿತು ಮಾಧ್ಯಮ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯಾಡಳಿತವು ಹೊಂಡವನ್ನು ಮುಚ್ಚುವ ಕಾರ್ಯ ಮಾಡಿದೆ.

ಮನೆ ಕುಸಿಯುವ ಆತಂಕದಲ್ಲಿದ್ದ ಕುಟುಂಬ: ದೇವರಗದ್ದೆ ನಿವಾಸಿ ಬಾಬು ಎಂಬವರ ಮನೆಯ ಗೋಡೆಗೆ ತಾಗಿಕೊಂಡಂತೆ ಚರಂಡಿ ನಿರ್ಮಾಣಕ್ಕೆಂದು ಜೆಸಿಬಿ ಮೂಲಕ ಆಳವಾದ ಹೊಂಡ ತೋಡಲಾಗಿತ್ತು. ಆದರೆ ತಿಂಗಳು ಸಮೀಪಿಸುತ್ತಾ ಬಂದರೂ ಗುತ್ತಿಗೆದಾರರಾಗಲಿ ಅಥವಾ ಸ್ಥಳೀಯಾಡಳಿತವಾಗಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೆಯೇ ಬಿಟ್ಟಿದ್ದರು. ಮಳೆ ಬಂದರೆ ಮಣ್ಣು ಕುಸಿದು ಮನೆಗೆ ಹಾನಿಯಾಗುವ ಭೀತಿಯಲ್ಲಿ ಕುಟುಂಬ ದಿನ ಕಳೆಯುವಂತಾಗಿತ್ತು.

ಸ್ಥಳೀಯಾಡಳಿತದ ನಿರಂತರ ನಿರ್ಲಕ್ಷ್ಯವನ್ನು ವಿರೋಧಿಸಿ ಸಂತ್ರಸ್ತ ಕುಟುಂಬಸ್ಥರು ಕಡಬ ತಾಲೂಕು ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೂ ಮೌಖಿಕ ದೂರು ಸಲ್ಲಿಸಿ ನ್ಯಾಯಕ್ಕೆ ಆಗ್ರಹಿಸಿದ್ದರು.

kadaba times
kadaba times

‘ಕಡಬ ಟೈಮ್ಸ್’ ವರದಿ ಹಾಗೂ ಯುವ ಉದ್ಯಮಿಗಳ ಸಾಂತ್ವನ: ಈ ಅಪಾಯಕಾರಿ ಹೊಂಡದ ಕುರಿತು ಸಾರ್ವಜನಿಕರು ಹಾಗೂ ಕುಟುಂಬಸ್ಥರು ಹಂಚಿಕೊಂಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜತೆಗೆ ‘ಕಡಬ ಟೈಮ್ಸ್’ ಈ ಸಮಸ್ಯೆಯ ಕುರಿತು ವಿವರವಾದ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಇದೇ ವೇಳೆ ಸಾಮಾಜಿಕ ಮುಂದಾಳು ರಾಘವ ಕಳಾರ ಜೊತೆ ಕಡಬದ ಯುವ ಉದ್ಯಮಿಗಳಾದ ದಯಾನಂದ ಗೌಡ ಆರಿಗ, ಕಾರ್ತಿಕ್ ಪಿಜಕ್ಕಳ ಹಾಗೂ ಜಯಂತ್ ಕುತ್ಯಾಡಿ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ್ದರು. “ಸ್ಥಳೀಯಾಡಳಿತವೇನಾದರೂ ಸಕಾಲದಲ್ಲಿ ಸ್ಪಂದಿಸದಿದ್ದರೆ ನಾವೇ ಖುದ್ದಾಗಿ ಸಮಸ್ಯೆಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡುತ್ತೇವೆ” ಎಂದು ಮಾನವೀಯತೆಯ ಭರವಸೆ ನೀಡಿದ್ದರು.

ಕೊನೆಗೂ ಎಚ್ಚೆತ್ತು ಹೊಂಡ ಮುಚ್ಚಿದ ಆಡಳಿತ: ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹಾಗೂ ಮಾಧ್ಯಮ ವರದಿಯ ಪ್ರಭಾವದಿಂದ ಎಚ್ಚೆತ್ತ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತವು, ಸ್ಥಳಕ್ಕೆ ಸಿಬ್ಬಂದಿಯನ್ನು ನಿಯೋಜಿಸಿ ಹೊಂಡವನ್ನು ಸಂಪೂರ್ಣವಾಗಿ ಮಣ್ಣು ಹಾಕಿ ಮುಚ್ಚಿಸಿದೆ. ಇದರಿಂದಾಗಿ ಕಳೆದ ಹಲವು ದಿನಗಳಿಂದ ಆತಂಕದಲ್ಲೇ ಕಾಲ ಕಳೆಯುತ್ತಿದ್ದ ಬಾಬು ಅವರ ಕುಟುಂಬಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

Related Articles

Latest Articles