
ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ಐಜಿಪಿ ಎನ್. ಶಶಿಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ (SIT) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. ಎಸ್ಐಟಿ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಮತ್ತು ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆ ಬಳಿಯ ಕಟ್ಟಡವನ್ನು ಕಚೇರಿಗಾಗಿ ಪರಿಶೀಲಿಸಿದ್ದು, ಮಂಗಳೂರಿನ ಹಳೆ ಡಿಸಿ ಕಚೇರಿಯಲ್ಲೂ ಸಿದ್ಧತೆಗಳು ಚುರುಕುಗೊಂಡಿವೆ


ಬೆಳ್ತಂಗಡಿ / ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶದ ಬೆನ್ನಲ್ಲೇ, ರಾಜ್ಯ ಸರ್ಕಾರ ರಚಿಸಿರುವ ನೂತನ ವಿಶೇಷ ತನಿಖಾ ತಂಡ (SIT) ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಕಾರ್ಯಪ್ರವೃತ್ತವಾಗಿದೆ.
ತನಿಖಾ ತಂಡದ ಮುಖ್ಯಸ್ಥರಾದ ಐಜಿಪಿ ಎನ್. ಶಶಿಕುಮಾರ್ ಐಪಿಎಸ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳು ಮಂಗಳೂರು ಮತ್ತು ಬೆಳ್ತಂಗಡಿಗೆ ಭೇಟಿ ನೀಡಿ ಕಚೇರಿ ಸ್ಥಾಪನೆ ಹಾಗೂ ಪ್ರಾಥಮಿಕ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಕಚೇರಿ ಪರಿಶೀಲಿಸಿದ ನಿಶಾ ಜೇಮ್ಸ್, ಲೋಕೇಶ್ ಜಗಲಾಸರ್: ಗುರುವಾರ ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದ ಎಸ್ಐಟಿ ಅಧಿಕಾರಿಗಳಾದ ಬೆಂಗಳೂರಿನ ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಐಪಿಎಸ್ ಮತ್ತು ಸಿಐಡಿ ಎಸ್ಪಿ ಲೋಕೇಶ್ ಜಗಲಾಸರ್ ಐಪಿಎಸ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆ ಧರ್ಮಸ್ಥಳ ಸೌಜನ್ಯಾ ಪ್ರಕರಣದ ತನಿಖೆ ವೇಳೆ ಇದೇ ಕಟ್ಟಡದಲ್ಲಿ ಎಸ್ಐಟಿ ಕಚೇರಿ ಕಾರ್ಯಾಚರಿಸಿತ್ತು. ಸ್ಥಳೀಯವಾಗಿ ನಿರಂತರ ವಿಚಾರಣೆ ಹಾಗೂ ತನಿಖಾ ಕಾರ್ಯಾಚರಣೆ ನಡೆಸಲು ಈ ಸ್ಥಳ ಹೆಚ್ಚು ಅನುಕೂಲಕರವಾಗಿರುವ ಹಿನ್ನೆಲೆಯಲ್ಲಿ, ಕಟ್ಟಡದಲ್ಲಿರುವ ಅಗತ್ಯ ಸೌಲಭ್ಯಗಳು, ಕೊಠಡಿಗಳು ಹಾಗೂ ಭದ್ರತೆಯ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಮಂಗಳೂರಿನ ಹಳೆ ಡಿಸಿ ಕಚೇರಿಯಲ್ಲೂ ಸಿದ್ಧತೆ: ಇನ್ನೊಂದೆಡೆ, ಎಸ್ಐಟಿ ಮುಖ್ಯಸ್ಥ ಐಜಿಪಿ ಎನ್. ಶಶಿಕುಮಾರ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ (Old DC Office) 2ನೇ ಮಹಡಿಯಲ್ಲಿ ತೆರೆಯಲಾಗಿರುವ ಎಸ್ಐಟಿ ಕಚೇರಿಗೂ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಎಸ್ಐಟಿಯ ಮುಖ್ಯ ಕಾರ್ಯಾಲಯ ಮಂಗಳೂರಿನಲ್ಲಿರಲಿದೆಯೋ ಅಥವಾ ತನಿಖಾ ಕೇಂದ್ರ ಬೆಳ್ತಂಗಡಿಯಲ್ಲೇ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆಯೋ ಎಂಬ ಬಗ್ಗೆ ಇಂದು ಮಂಗಳೂರಿನಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಸ್ಥಳೀಯವಾಗಿ ಸಾಕ್ಷ್ಯ ಸಂಗ್ರಹ ಹಾಗೂ ಸ್ಥಳ ಮಹಜರಿಗೆ ಬೆಳ್ತಂಗಡಿಯ ಕಚೇರಿಯೇ ಕೇಂದ್ರಬಿಂದುವಾಗುವ ಸಾಧ್ಯತೆ ದಟ್ಟವಾಗಿದೆ.
ಸುಪ್ರೀಂ ಕೋರ್ಟ್ ಆದೇಶ – 3 ತಿಂಗಳ ಗಡುವು: 2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿ ಸೌಜನ್ಯಾಳ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಕುರಿತು ಹೊಸದಾಗಿ ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿತ್ತು. ಎಸ್ಐಟಿ ರಚಿಸಿ, ಮೂರು ತಿಂಗಳೊಳಗೆ ಅನುಸರಣಾ ವರದಿ (Compliance Report) ಸಲ್ಲಿಸುವಂತೆ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ದಕ್ಷ ಐಪಿಎಸ್ ಅಧಿಕಾರಿಗಳ ತಂಡವನ್ನು ಕಣಕ್ಕಿಳಿಸಿದೆ.
ಎಸ್ಐಟಿ ಅಧಿಕಾರಿಗಳು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿದಿರುವುದು ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ದಶಕಗಳಿಂದ ಕಾಯುತ್ತಿರುವ ಸಾರ್ವಜನಿಕರಲ್ಲಿ ಹಾಗೂ ಕುಟುಂಬಸ್ಥರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
