ನಕಲಿ ಹಾಲ್ ಟಿಕೆಟ್ ಸೃಷ್ಟಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಕಡಬದ ಯುವಕ ಜೈಲುಪಾಲು

kadaba times

ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ–2026ರ ದೈಹಿಕ ಪರೀಕ್ಷೆಗೆ ಹಾಜರಾಗಲು, ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದೆ ಮತ್ತೊಬ್ಬ ಅಭ್ಯರ್ಥಿಯ ಹಾಲ್ ಟಿಕೆಟ್‌ ಅನ್ನು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ತಿರುಚಿ ನಕಲಿ ಕರೆಪತ್ರ ಸೃಷ್ಟಿಸಿದ್ದ ಕಡಬದ  ಯುವಕ ಯಜ್ಞೇಶ್ ಬಿ.ಜೆ. ರೈ ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಬರ್ಕೆ ಪೊಲೀಸರು ಕಡಬದ ಜೆರಾಕ್ಸ್ ಅಂಗಡಿಯೊಂದಕ್ಕೂ ಭೇಟಿ ನೀಡಿ ಮಹತ್ವದ ಪರಿಶೀಲನೆ ನಡೆಸಿದ್ದಾರೆ

kadaba times
uniq

ಕಡಬ:ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (CPC) ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಕಲಿ ಹಾಲ್ ಟಿಕೆಟ್ ಸೃಷ್ಟಿಸಿ ವಂಚಿಸಲು ಯತ್ನಿಸಿದ ಕಡಬ ಮೂಲದ ಯುವಕನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ಮನೆ ನಿವಾಸಿ ಯಜ್ಞೇಶ್ ಬಿ.ಜೆ. ರೈ (22) ಎಂದು ಗುರುತಿಸಲಾಗಿದೆ.

ಘಟನೆಯ ವಿವರ – ಸಿಕ್ಕಿಬಿದ್ದಿದ್ದು ಹೇಗೆ?:

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ–2026ರ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ (ET & PST) ಪರೀಕ್ಷೆಯು ಸೆಪ್ಟೆಂಬರ್ 28 ರಂದು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು.

ನೋಂದಣಿ ಡೆಸ್ಕ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಆರೋಪಿ ಯಜ್ಞೇಶ್ ರೈ ಹಾಲ್ ಟಿಕೆಟ್ (ಸಂಖ್ಯೆ: CPC5225446) ಹಾಜರುಪಡಿಸಿದ್ದಾನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ, ಅರ್ಜಿ ಸಂಖ್ಯೆಯಾಗಲಿ ಕಂಡುಬಂದಿಲ್ಲ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಮೇಲ್ನೋಟಕ್ಕೇ ನಕಲಿ ಎಂಬುದು ಬೆಳಕಿಗೆ ಬಂದಿದೆ.

kadaba times
kadaba times

ಲಿಖಿತ ಪರೀಕ್ಷೆಯಲ್ಲಿ ಫೇಲ್ – ಎಐ ಬಳಸಿ ದಾಖಲೆ ಸೃಷ್ಟಿ: ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಟಾಬಯಲಾಗಿದೆ. ಆರೋಪಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ. ಆದರೂ ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್ ಟಿಕೆಟ್ ಪಡೆದುಕೊಂಡು, ಎಐ (Artificial Intelligence) ತಂತ್ರಜ್ಞಾನ ಬಳಸಿ ಅದರಲ್ಲಿ ತನ್ನ ಹೆಸರು ಹಾಗೂ ವಿವರಗಳನ್ನು ಎಡಿಟ್ ಮಾಡಿ ನಕಲಿ ಕರೆಪತ್ರ ಸೃಷ್ಟಿಸಿಕೊಂಡಿದ್ದನು.

ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಆ ನಕಲಿ ಹಾಲ್ ಟಿಕೆಟ್ ಎಡಿಟ್ ಮಾಡಿ ರಚಿಸಿರುವುದಕ್ಕೆ ಸಂಬಂಧಿಸಿದ ನೇರ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.

ಕಡಬದ ಜೆರಾಕ್ಸ್ ಅಂಗಡಿಯಲ್ಲಿ ಪೊಲೀಸರ ತನಿಖೆ: ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 87/2026, ಕಲಂ 336(1), 336(3) (ನಕಲಿ ದಾಖಲೆ ಸೃಷ್ಟಿ) ಹಾಗೂ 318(4) (ವಂಚನೆ) ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.  ಈ ನಕಲಿ ಹಾಲ್ ಟಿಕೆಟ್ ಪ್ರಿಂಟ್ ಪಡೆದುಕೊಂಡಿದ್ದ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಬರ್ಕೆ ಪೊಲೀಸ್ ಠಾಣೆಯ ತನಿಖಾ ತಂಡವು ಕಡಬಕ್ಕೆ ಆಗಮಿಸಿ, ಸ್ಥಳೀಯ ಜೆರಾಕ್ಸ್/ಸೈಬರ್ ಅಂಗಡಿಯೊಂದಕ್ಕೆ ಭೇಟಿ ನೀಡಿ ಮಹತ್ವದ ಮಹಜರು ಹಾಗೂ ಪರಿಶೀಲನೆ ನಡೆಸಿದೆ.

Related Articles

Latest Articles