
ಮಂಗಳೂರು ನಗರದ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್ನ ಧರ್ಮಗುರು (ಫಾದರ್) ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕನಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಬಾಲಕನ ದೂರಿನ ಮೇರೆಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಹಾಗೂ ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.


ಮಂಗಳೂರು: ಮಂಗಳೂರು ನಗರದ ವೆಲೆನ್ಸಿಯಾದಲ್ಲಿರುವ ಪ್ರತಿಷ್ಠಿತ ಚರ್ಚ್ನ ಧರ್ಮಗುರು ವಿರುದ್ಧ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 212/2026 ರಲ್ಲಿ ಪೋಕ್ಸೊ (POCSO) ಕಾಯ್ದೆ-2012ರ ಕಲಂ 8, 10 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಫ್ಐಆರ್ನಲ್ಲಿರುವ ಆರೋಪದ ವಿವರ: ದೂರಿನ ಪ್ರಕಾರ, ಸಂತ್ರಸ್ತ ಅಪ್ರಾಪ್ತ ಬಾಲಕನು ಪ್ರಾರ್ಥನೆಗಾಗಿ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿ ಫಾದರ್ ಸಿಪ್ರಿಯನ್ ಪಿಂಟೋ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸುತ್ತಿದ್ದರು. ಬಾಲಕನಿಗೆ “You are a sweet boy, ನೀನು ತುಂಬಾ ಒಳ್ಳೆಯದಾಗಿ ಸ್ಮೈಲ್ ಮಾಡುತ್ತೀಯಾ, I Love You” ಎಂದು ಹೇಳಿ ಆಕರ್ಷಿಸಿ, ಚರ್ಚ್ನ ಸಾಕ್ರಸ್ಟಿ ಕೊಠಡಿ ಬಳಿಯ ಕೋಣೆಗೆ ಕರೆದೊಯ್ದು ಲೈಂಗಿಕ ದುರುದ್ದೇಶದಿಂದ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು.
ಬಾಲಕ ಪ್ರಾರ್ಥನೆಗೆ ಬಂದಾಗಲೆಲ್ಲ ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಆಗಸ್ಟ್ 14ರಂದು ಸಂಜೆ 6:30ರ ಸುಮಾರಿಗೆ ಚರ್ಚ್ಗೆ ತೆರಳಿದ್ದ ಬಾಲಕನನ್ನು ರೆಸಿಡೆನ್ಸಿಯ ಕೊಠಡಿಗೆ ಕರೆದೊಯ್ದು ಬಲವಂತವಾಗಿ ಅಪ್ಪಿಕೊಂಡು ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ವಿವರಿಸಲಾಗಿದೆ.


ಬಾಲಕನು ತನ್ನ ಸ್ನೇಹಿತರೊಂದಿಗೆ ಈ ವಿಚಾರವನ್ನು ಹಂಚಿಕೊಂಡಾಗ, ಫಾದರ್ ಸಿಪ್ರಿಯನ್ ಪಿಂಟೋ ಅವರಿಗೂ ಇದೇ ರೀತಿ ನಿರಂತರವಾಗಿ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಷಪ್ ಸೂಚನೆಯಂತೆ ಪೊಲೀಸರಿಗೆ ದೂರು: ಫಾದರ್ ನಡೆಸುತ್ತಿದ್ದ ನಿರಂತರ ಲೈಂಗಿಕ ಕಿರುಕುಳದಿಂದ ಕಂಗೆಟ್ಟ ಬಾಲಕನು ಕೊನೆಗೆ ಧೈರ್ಯಮಾಡಿ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಪೋಷಕರೊಂದಿಗೆ ತೆರಳಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಈ ವೇಳೆ ಬಿಷಪ್ ಅವರು ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಅಪ್ರಾಪ್ತ ಬಾಲಕನ ರಕ್ಷಣಾ ಹಿತದೃಷ್ಟಿಯಿಂದ ಸಂತ್ರಸ್ತನ ಗುರುತು ಹಾಗೂ ವಿಳಾಸವನ್ನು ಗೌಪ್ಯವಾಗಿಡಲಾಗಿದ್ದು, ಮಂಗಳೂರು ನಗರ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
