ಬಿಳಿನೆಲೆ: ಕಸ್ತೂರಿರಂಗನ್ ವರದಿ ವಿರುದ್ಧ ಗ್ರಾ.ಪಂ. ಎದುರು ಭುಗಿಲೆದ್ದ ಆಕ್ರೋಶ

kadaba times

ಕಡಬ / ಬಿಳಿನೆಲೆ: ಮಲೆನಾಡು ಹಾಗೂ ಕರಾವಳಿ ಭಾಗದ ರೈತರ ಕೃಷಿ ಬದುಕಿಗೆ ಕಂಟಕವಾಗಿರುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿ ಬಿಳಿನೆಲೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಪ್ರತಿಭಟನೆ ಜರುಗಿತು.

kadaba times
uniq

ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪರಿಸರ ಸಂಬಂಧಿತ ಅವೈಜ್ಞಾನಿಕ ನೀತಿಗಳ ವಿರುದ್ಧ ಘೋಷಣೆ ಕೂಗಿ, ಗ್ರಾಮ ಪಂಚಾಯಿತಿ ಮೂಲಕ ಸರಕಾರಕ್ಕೆ ಮನವಿ ಪತ್ರ ರವಾನಿಸಿದರು.

ಜನರ ಕಣ್ಣಿಗೆ ಮಣ್ಣೆರಚಿ ಅರಣ್ಯೀಕರಣ – ಕಿಶೋರ್ ಶಿರಾಡಿ: ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಕಿಶೋರ್ ಶಿರಾಡಿ ಮಾತನಾಡಿ, “ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಜನಸಾಮಾನ್ಯರ ಹಾಗೂ ರೈತರ ಗಮನಕ್ಕೆ ತಾರದೆ ಸರಕಾರಿ ಜಮೀನುಗಳನ್ನು ಹಂತ ಹಂತವಾಗಿ ಕಾನೂನುಬಾಹಿರವಾಗಿ ಅರಣ್ಯ ಭೂಮಿಯನ್ನಾಗಿ ಪರಿವರ್ತಿಸುತ್ತಿದ್ದಾರೆ. ಕಸ್ತೂರಿರಂಗನ್ ವರದಿಯಂತಹ ಮಾರಕ ಯೋಜನೆಗಳನ್ನು ಸದ್ದಿಲ್ಲದೆ ನಮ್ಮ ಮೇಲೆ ಹೇರುವ ದುರುದ್ದೇಶ ಇದರ ಹಿಂದಿದೆ. ಜನರನ್ನು ದಿಕ್ಕು ತಪ್ಪಿಸಿ ಕಸ್ತೂರಿರಂಗನ್ ಜಾರಿಗೊಳಿಸಲು ಬಿಡುವುದಿಲ್ಲ” ಎಂದು ಎಚ್ಚರಿಸಿದರು.

16 ವರ್ಷಗಳ ನಿರಂತರ ಹೋರಾಟ – ದಾಮೋದರ್ ಗುಂಡ್ಯ: ಹೋರಾಟ ಸಮಿತಿಯ ಪ್ರಮುಖರಾದ ದಾಮೋದರ್ ಗುಂಡ್ಯ ಮಾತನಾಡಿ, “ಮಲೆನಾಡು ಜನಹಿತ ರಕ್ಷಣಾ ವೇದಿಕೆಯು ಕಳೆದ 16 ವರ್ಷಗಳಿಂದ ನಿರಂತರ ಹೋರಾಟ ಸಂಘಟಿಸಿಕೊಂಡು ಬಂದ ಪರಿಣಾಮವೇ ಈ ಭಾಗದಲ್ಲಿ ವನ್ಯಧಾಮ ಹೇರುವ ಸರಕಾರದ ಪ್ರಯತ್ನಗಳಿಗೆ ಪ್ರಬಲ ತಡೆಗೋಡೆಯಾಗಿ ನಿಲ್ಲಲು ಸಾಧ್ಯವಾಯಿತು. ರೈತರ ಹಿತ ಕಾಯಲು ಗ್ರಾಮಸ್ಥರು ಒಗ್ಗಟ್ಟಾಗಿ ಇಂತಹ ಜನವಿರೋಧಿ ವರದಿಗಳ ವಿರುದ್ಧ ಸಿಡಿದೇಳಬೇಕು” ಎಂದು ಕರೆ ನೀಡಿದರು.

kadaba times
kadaba times

ವೇದಿಕೆಯಲ್ಲಿ ಪ್ರಮುಖರಾದ ಸತೀಶ್ ಎರ್ಕ, ಹಿರಿಯಣ್ಣ ಗೌಡ, ವಾಡ್ಯಪ್ಪ ಗೌಡ ಎರ್ಮಾಯಿಲ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾ.ಪಂ. ಮೂಲಕ ಸರಕಾರಕ್ಕೆ ಮನವಿ: ಪ್ರತಿಭಟನೆಯಲ್ಲಿ ಮುಖಂಡರಾದ ಉಮಾವತಿ, ಯಶವಂತ ಕಳಿಗೆ, ರಘು ಚೆಂಡೆತ್ತಿಲು, ಧರ್ಮಪಾಲ, ಸೂಡ್ಲು ವೇದಿಕೆಯ ಜಿಲ್ಲಾ ಪ್ರಮುಖರಾದ ರಮಾನಂದ ಎಣ್ಣೆಮಜಲು ಸೇರಿದಂತೆ ಬಿಳಿನೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಗ್ರಾಮ ಪಂಚಾಯಿತಿ ಮೂಲಕ ಸಂಬಂಧಪಟ್ಟ ಸಚಿವರು ಹಾಗೂ ಇಲಾಖಾಧಿಕಾರಿಗಳಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.

Related Articles

Latest Articles