ಮೊಬೈಲ್ ವಿಚಾರಕ್ಕೆ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಅಣ್ಣ

kadaba times

ಮಂಗಳೂರು:ಮೊಬೈಲ್ ಫೋನ್ ಕೊಡುವ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳದ ವೇಳೆ ತನ್ನ ಸ್ವಂತ ತಂಗಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆಗೈದು, ಮೃತದೇಹವನ್ನು ಪೊದೆಯಲ್ಲಿ ಬಚ್ಚಿಟ್ಟಿದ್ದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.

kadaba times
uniq

ಕಂಬಳಪದವು ನಿವಾಸಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೆ ಗುರಿಯಾದ ಆರೋಪಿ.

ಘಟನೆಯ ವಿವರ:ದಿನಾಂಕ 08-10-2019 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಕಂಬಳಪದವಿನಲ್ಲಿರುವ ತಮ್ಮ ಮನೆಯಲ್ಲಿ, ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಬಳಿ ಮೊಬೈಲ್ ಬಳಸಲು ಕೊಡುವಂತೆ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಜಗಳ ನಡೆದಿದೆ.

ಕೋಪೋದ್ರಿಕ್ತನಾದ ಆರೋಪಿ ಸ್ಯಾಮ್ಸನ್, ಮನೆಯಲ್ಲಿದ್ದ ಸುತ್ತಿಗೆಯಿಂದ ತಂಗಿಯ ತಲೆಗೆ ಬಲವಾಗಿ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಮೃತದೇಹವನ್ನು ಮನೆಯ ಹಿಂಭಾಗದಲ್ಲಿದ್ದ ನಿರ್ಜನ ಪೊದೆಯಲ್ಲಿ ಬಚ್ಚಿಟ್ಟಿದ್ದನು.

ಕಾಣೆಯಾಗಿದ್ದ ಪ್ರಕರಣ ಕೊಲೆ ಕೇಸ್ ಆಗಿ ಬದಲಾಗಿತ್ತು:ಮಗಳು ಮನೆಗೆ ಬಾರದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮೃತ ಫಿಯೋನಾ ಸ್ವೀಡಲ್ ಅವರ ತಂದೆ ಪ್ರಾನ್ಸಿಸ್ ಕುಟಿನ್ಹಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮೊದಲು ಮೊ.ನಂ: 67/2019, ಕಲಂ 363 ಐಪಿಸಿ (ಅಪಹರಣ/ನಾಪತ್ತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

kadaba times
kadaba times

ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಂಗಳೂರು ದಕ್ಷಿಣ ವಿಭಾಗದ ಅಂದಿನ ಎಸಿಪಿ (ACP) ಟಿ. ಕೋದಂಡ ರಾಮ್ ಅವರು ಸಮಗ್ರ ತನಿಖೆ ನಡೆಸಿ, ಕೊಲೆ ರಹಸ್ಯವನ್ನು ಭೇದಿಸಿ ನ್ಯಾಯಾಲಯಕ್ಕೆ ಕಲಂ 302 (ಕೊಲೆ) ಹಾಗೂ 201 (ಸಾಕ್ಷ್ಯನಾಶ) ಐಪಿಸಿ ಪ್ರಕಾರ ದಿನಾಂಕ 10-01-2020 ರಂದು ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯ ನೀಡಿದ ತೀರ್ಪು:ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಸುದೀರ್ಘ ಸಾಕ್ಷಿ ವಿಚಾರಣೆ ನಡೆದು, ದಿನಾಂಕ 24-08-2026 ರಂದು ಮಾನ್ಯ ನ್ಯಾಯಾಧೀಶರು ಆರೋಪಿಗೆ ಈ ಕೆಳಗಿನಂತೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.ಕಲಂ 304 (ii) ಐಪಿಸಿ (ಅನಿರೀಕ್ಷಿತ ಆಕ್ರೋಶದ ನರಹತ್ಯೆ): 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹10,000/- ದಂಡ.ಕಲಂ 201 ಐಪಿಸಿ (ಸಾಕ್ಷ್ಯನಾಶ): 1 ವರ್ಷದ ಜೈಲು ಶಿಕ್ಷೆ ಹಾಗೂ ₹1,000/- ದಂಡ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕಿ (Public Prosecutor) ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.

Related Articles

Latest Articles