
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗಾಂಧಿನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೊಬ್ಬ ಹೆತ್ತ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಬಡಿದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕೊಲೆಗೈದ ಆರೋಪಿ ಶಾಹಿದ್ ಅಲಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಹೆತ್ತ ಕರುಳನ್ನೇ ಕತ್ತರಿಸಿ ಹಾಕಿದಂತಹ ಅತ್ಯಂತ ಘೋರ ಹಾಗೂ ಅಮಾನವೀಯ ಕೃತ್ಯವೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಗಾಂಧಿನಗರದಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಹೆತ್ತವರೊಂದಿಗೆ ಜಗಳವಾಡಿದ ಮಗನೊಬ್ಬ ತನ್ನ ತಂದೆ ಮತ್ತು ತಾಯಿಯ ತಲೆಗೆ ಸುತ್ತಿಗೆಯಿಂದ ಬಡಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಗಾಂಧಿನಗರದ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಹತ್ಯೆಯಾದ ದುರ್ದೈವಿ ದಂಪತಿ.
ಘಟನೆಯ ವಿವರ: ಮೃತ ಮೆಹಬೂಬ್ ಅಲಿ ಅವರು ಲಾರಿ ಚಾಲಕರಾಗಿ ಜೀವನ ಸಾಗಿಸುತ್ತಿದ್ದು, ಅವರ ಪುತ್ರ ಆರೋಪಿ ಶಾಹಿದ್ ಅಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಭಾನುವಾರ ರಾತ್ರಿ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ-ತಾಯಿಯೊಂದಿಗೆ ಆರೋಪಿ ಶಾಹಿದ್ ಅಲಿ ಜಗಳ ಆರಂಭಿಸಿದ್ದಾನೆ.


ವಾದ-ವಿವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಆತ, ಮನೆಯಲ್ಲಿದ್ದ ಸುತ್ತಿಗೆಯನ್ನು ತಂದು ತಂದೆ ಮೆಹಬೂಬ್ ಅಲಿ ಮತ್ತು ತಾಯಿ ಶಂಶಾದ್ ಬೇಗಂ ಅವರ ತಲೆಗೆ ಮನಬಂದಂತೆ ಬಡಿದಿದ್ದಾನೆ. ಗಂಭೀರ ರಕ್ತಸ್ರಾವದಿಂದ ತತ್ತರಿಸಿದ ದಂಪತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.
ಕೊಲೆ ಬಳಿಕ ಪೊಲೀಸರಿಗೇ ಕರೆ ಮಾಡಿದ ಆರೋಪಿ: ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಬಳಿಕ ಆರೋಪಿ ಶಾಹಿದ್ ಅಲಿ ತಾನೇ ಸ್ವತಃ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಬ್ರಹ್ಮಾವರ ಠಾಣಾ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಗೆ ಕೇವಲ ಕೌಟುಂಬಿಕ ಕಲಹವೇ ಕಾರಣವೇ ಅಥವಾ ಹಣಕಾಸಿನ ವಿಚಾರ ಹಾಗೂ ದುಶ್ಚಟಗಳ ಹಿನ್ನೆಲೆ ಇದೆಯೇ ಎಂಬ ಕುರಿತು ಬ್ರಹ್ಮಾವರ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
