Google Pay Scam:ಹೆಲ್ಮೆಟ್ ಧರಿಸಿ ಬಂದು ಅಂಗಡಿ ಮಾಲಕಿಗೆ ಪಂಗನಾಮ!

kadaba times

ಕುಂಬ್ರ / ಪುತ್ತೂರು: ಡಿಜಿಟಲ್ ಪಾವತಿಯ ನೆಪವೊಡ್ಡಿ ಮುಗ್ಧ ವ್ಯಾಪಾರಿಗಳನ್ನು ವಂಚಿಸುವ ಖದೀಮರ ಜಾಲವೊಂದು ಸಕ್ರಿಯವಾಗಿದ್ದು, ಕುಂಬ್ರ ಪೇಟೆಯ ಗಾಣಿಗ ಆಯಿಲ್ ಮಿಲ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ನಕಲಿ ಗೂಗಲ್ ಪೇ ಪಾವತಿಯ ನಟನೆಯ ಮೂಲಕ ಅಂಗಡಿ ಮಾಲಕಿಗೆ ವಂಚಿಸಿ ಪರಾರಿಯಾಗಿದ್ದಾನೆ.ಆಗಸ್ಟ್ 26ರ ಸಂಜೆ ಈ ಘಟನೆ ನಡೆದಿದೆ.

kadaba times
uniq

ಹೆಲ್ಮೆಟ್ ಧರಿಸಿ ಎಂಟ್ರಿ : ಸ್ಕೂಟರ್‌ನಲ್ಲಿ ಗಾಣಿಗ ಆಯಿಲ್ ಮಿಲ್‌ಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ  ಅಂಗಡಿಯವರಿಗೆ ಮುಖ ಕಾಣಿಸದಂತೆ ಹೆಲ್ಮೆಟ್ ಧರಿಸಿಕೊಂಡೇ ಒಳಗೆ ಪ್ರವೇಶಿಸಿದ್ದಾನೆ. ಬಳಿಕ ₹200 ಮೌಲ್ಯದ ತೆಂಗಿನ ಎಣ್ಣೆ ಖರೀದಿಸಿದ ಆತ, ತನಗೆ ತುರ್ತಾಗಿ ₹1,000 ನಗದು (ಕ್ಯಾಶ್) ಹಣದ ಅಗತ್ಯವಿದೆ ಎಂದು ಮಾಲಕಿಯ ಬಳಿ ವಿನಂತಿಸಿಕೊಂಡಿದ್ದಾನೆ. ಎಣ್ಣೆಯ ಬೆಲೆ ₹200 ಸೇರಿ ಒಟ್ಟು ₹1,200 ಹಣವನ್ನು ತಕ್ಷಣವೇ ‘ಗೂಗಲ್ ಪೇ’ (Google Pay) ಮೂಲಕ ಪಾವತಿಸುವುದಾಗಿ ನಂಬಿಸಿದ್ದಾನೆ.

ಹಣವೂ ಇಲ್ಲ, ಎಣ್ಣೆಯೂ ಇಲ್ಲ: ಆತನ ಮಾತನ್ನು ನಂಬಿದ ಅಂಗಡಿ ಮಾಲಕಿ ₹200 ಮೌಲ್ಯದ ತೆಂಗಿನ ಎಣ್ಣೆ ಹಾಗೂ ಕೈಯಿಂದ ₹1,000 ನಗದನ್ನು ಆತನಿಗೆ ನೀಡಿದ್ದಾರೆ. ಈ ವೇಳೆ ತನ್ನ ಮೊಬೈಲ್‌ನಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದಂತೆ ನಟಿಸಿ ಸಕ್ಸಸ್ ಸ್ಕ್ರೀನ್ ತೋರಿಸಿದ ಆತ, ಕ್ಷಣಾರ್ಧದಲ್ಲೇ ಸ್ಕೂಟರ್ ಸ್ಟಾರ್ಟ್ ಮಾಡಿ ಅಲ್ಲಿಂದ ಕಾಲ್ತೆಗೆದಿದ್ದಾನೆ.

kadaba times
kadaba times

ಸ್ವಲ್ಪ ಸಮಯದ ಬಳಿಕ ಅಂಗಡಿಯವರು ಬ್ಯಾಂಕ್ ಖಾತೆ ಹಾಗೂ ಮೆಸೇಜ್ ಪರಿಶೀಲಿಸಿದಾಗ ಖಾತೆಗೆ ಯಾವುದೇ ಹಣ ಜಮೆಯಾಗದಿರುವುದು ಗೊತ್ತಾಗಿದೆ. ಇದರಿಂದಾಗಿ ಅಂಗಡಿಯವರಿಗೆ ₹1,000 ನಗದು ಹಣವೂ ಕೈತಪ್ಪಿ, ಎಣ್ಣೆಯೂ ಸಿಗದೆ ನೇರವಾಗಿ ವಂಚನೆಗೊಳಗಾಗಿದ್ದಾರೆ.

 ಡಿಜಿಟಲ್ ಪಾವತಿಯ ಹೆಸರಿನಲ್ಲಿ ನಕಲಿ ಆ್ಯಪ್ ಅಥವಾ ಸ್ಕ್ರೀನ್‌ಶಾಟ್ ತೋರಿಸಿ ನಗದು ಪಡೆಯುವ ಇಂತಹ ವಂಚಕರ ಬಗ್ಗೆ ಸ್ಥಳೀಯ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಎಚ್ಚರದಿಂದಿರಬೇಕು ಹಾಗೂ ಖಾತೆಗೆ ಹಣ ಜಮೆಯಾದ ಧ್ವನಿ ಸಂದೇಶ (Soundbox) ಅಥವಾ ಬ್ಯಾಂಕ್ ಸಂದೇಶ ಖಚಿತಪಡಿಸಿಕೊಂಡೇ ನಗದು ನೀಡುವುದು ಅಗತ್ಯವಾಗಿದೆ.

Related Articles

Latest Articles