
ಆಗಸ್ಟ್ 29 ರಂದು ರಾಮಕುಂಜದ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ಜರುಗಲಿರುವ ‘ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಕುಂತೂರುಪದವಿನ ಹಿರಿಯ ಸಾಹಿತಿ, ಸಮಾಜ ಸೇವಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ


ರಾಮಕುಂಜ / ಕಡಬ: ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಗಸ್ಟ್ 29 ರಂದು ರಾಮಕುಂಜದ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿರುವ ‘ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಸಮ್ಮೇಳನಾಧ್ಯಕ್ಷರಾಗಿ (ಸರ್ವಾಧ್ಯಕ್ಷರು) ಕಡಬ ತಾಲೂಕಿನ ಕುಂತೂರುಪದವು ನಿವಾಸಿ, ಹಿರಿಯ ಸಾಹಿತಿ ಹಾಗೂ ಸಮಾಜ ಸೇವಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಜನನ ಹಾಗೂ ಕೌಟುಂಬಿಕ ಹಿನ್ನೆಲೆ:
ಮಾರ್ಚ್ 1, 1947 ರಂದು ಜನಿಸಿದ ಶಕುಂತಲಾ ಶೆಟ್ಟಿ ಅವರು ದಿವಂಗತ ಎಣ್ಮಕಜೆ ಪಟೇಲ್ ನಾರಾಯಣ ಅಡ್ಯಂತಾಯ ಹಾಗೂ ದಿವಂಗತ ಬೋಳ್ಯಗುತ್ತು ಸಂಜೀವಿ ಅಡ್ಯಂತಾಯ ದಂಪತಿಗಳ ಸುಪುತ್ರಿ. ಇವರ ಪತಿ, ಕುಂತೂರುಪದವು ನಿವಾಸಿ ದಿ| ತಿಮ್ಮಪ್ಪ ಶೆಟ್ಟಿಯವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರಿಗೆ ಬಿಪಿನ್, ನಿತಿನ್ ಮತ್ತು ಸಚಿನ್ ಎಂಬ ಮೂವರು ಪುತ್ರರಿದ್ದಾರೆ.
ಸಾಹಿತ್ಯ, ರೇಡಿಯೋ ಮತ್ತು ಕಲಾ ಸೇವೆ:
1970 ರ ದಶಕದಲ್ಲೇ ಸಮಾಜ ಸೇವೆಗೆ ಧುಮುಕಿದ ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇವರು ರಚಿಸಿದ ‘ಪೊಸ ಬದಕ್’ ತುಳು ನಾಟಕಕ್ಕೆ ಪ್ರತಿಷ್ಠಿತ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ. 1995-1997ರ ಅವಧಿಯಲ್ಲಿ ಆಕಾಶವಾಣಿ (ಮಂಗಳೂರು) ಕೃಷಿರಂಗದಲ್ಲಿ ಸದಸ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದು, 70 ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. ಕವನ, ಕಥೆ, ಭಾವಗೀತೆ ಹಾಗೂ ಕಿರುಪದ್ಯಗಳ ಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅಲ್ಲದೆ ತುಳು ಸಿನಿಮಾದಲ್ಲಿನ ಮನೋಜ್ಞ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.


ಸಾಮಾಜಿಕ & ಸಹಕಾರಿ ರಂಗದ ಛಾಪು:
1978 ರಲ್ಲಿ ಕುಂತೂರು ಮಹಿಳಾ ಮಂಡಲ ಹಾಗೂ 1980 ರಲ್ಲಿ ಶ್ರೀ ವಿದ್ಯಾಸರಸ್ವತಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆಯಾಗಿದ್ದ ಇವರು, ತಾಲೂಕು ಮಹಿಳಾ ಮಂಡಲ ಒಕ್ಕೂಟ, ಜಿಲ್ಲಾ ಮಹಿಳಾ ಸಂಘ, ಸಮರ್ಪಣಾ ಟ್ರಸ್ಟ್ ಹಾಗೂ ಆಲಂಕಾರು ಶ್ರೀ ಭಾರತಿ ಶಾಲಾ ಆಡಳಿತ ಮಂಡಳಿಯಲ್ಲಿ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ರಂಗದಲ್ಲೂ ಸಕ್ರಿಯರಾಗಿದ್ದದ್ದರು
ಅರಸಿ ಬಂದ ಪ್ರಮುಖ ಪುರಸ್ಕಾರಗಳು:
ಅವರ ಸುದೀರ್ಘ ಸಮಾಜ ಹಾಗೂ ಸಾಹಿತ್ಯ ಸೇವೆಗೆ ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಬಂಟ್ಸ್ ಮಹಿಳಾ ಸಮಾಜದಿಂದ ಸೇವಾರತ್ನ ಪುರಸ್ಕಾರ, ಕುಕ್ಕಾಜೆ ಕ್ಷೇತ್ರದಿಂದ ‘ತುಳುನಾಡ ಕಣ್ಮಣಿ’ ಪ್ರಶಸ್ತಿ, ಪುತ್ತೂರು ಪರ್ಲ್ ಸಿಟಿ ಪ್ರಶಸ್ತಿ ಹಾಗೂ ಹಲವು ಗೌರವ ಪ್ರಶಸ್ತಿಗಳು ಸಂದಿವೆ.
ಆಗಸ್ಟ್ 29 ರಂದು ನಡೆಯಲಿರುವ ಸಮ್ಮೇಳನದಲ್ಲಿ ತಾಲೂಕಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಸಾಪ ಪದಾಧಿಕಾರಿಗಳು ಕೋರಿದ್ದಾರೆ.
