
ಕಡಬ ತಾಲೂಕಿನ ಮರ್ದಾಳ ಸಮೀಪದ ಶತಮಾನ ಕಂಡ ಬಂಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸುರೇಶ್ ಡಿ. ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಅಪಾಯಕಾರಿ ಕೊಠಡಿಗಳ ಬಳಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ.


ಮರ್ಧಾಳ / ಕಡಬ:ಕಡಬ ತಾಲೂಕಿನ ಮರ್ಧಾಳ ಸಮೀಪದ ಶತಮಾನದ ಇತಿಹಾಸವಿರುವ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಆತಂಕ ಸೃಷ್ಟಿಸಿದೆ.
ಶಾಲಾ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಹಾಗೂ ಮೇಲ್ಛಾವಣಿಯ ಭಾಗಗಳು ಉದುರಿ ಬೀಳುತ್ತಿರುವ ಕುರಿತು ಪೋಷಕರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸುರೇಶ್ ಡಿ. ಅವರು ಗುರುವಾರ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಅಪಾಯಕಾರಿ ಕೊಠಡಿಗಳ ಬಳಕೆ ಬಂದ್: ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ಅವರು, ಶಾಲೆಯ ಕಟ್ಟಡದ ಕೆಲವು ಭಾಗಗಳು ವಿದ್ಯಾರ್ಥಿಗಳ ಬಳಕೆಗಾಗಿ ಸುರಕ್ಷಿತವಾಗಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಶಿಥಿಲಗೊಂಡಿರುವ ಕೊಠಡಿಗಳ ಬಳಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.
ವಿದ್ಯಾರ್ಥಿಗಳ ಪಾಠಪ್ರವಚನಗಳಿಗೆ ಅಡಚಣೆಯಾಗದಂತೆ ಪರ್ಯಾಯ ಕೊಠಡಿಗಳಲ್ಲಿ ಅಥವಾ ಅಗತ್ಯವಿರುವ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಅಲ್ಲದೆ, ಕಟ್ಟಡದ ತಾಂತ್ರಿಕ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಸಂಖ್ಯೆ ಕುಸಿತ – ಪೋಷಕರ ಆತಂಕ: ದಶಕಗಳ ಹಿಂದೆ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಈ ಐತಿಹಾಸಿಕ ಶಾಲೆಯಲ್ಲಿ ಪ್ರಸ್ತುತ 94 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 10 ಕೊಠಡಿಗಳ ಪೈಕಿ ಹಳೆಯ ಕಟ್ಟಡಗಳು ಸಂಪೂರ್ಣ ಬಿರುಕು ಬಿಟ್ಟಿದ್ದು, ಕೇವಲ 2 ಕೊಠಡಿಗಳು ಹಾಗೂ ಸಭಾಂಗಣ ಮಾತ್ರ ಸುಸ್ಥಿತಿಯಲ್ಲಿವೆ.
ಕಟ್ಟಡದ ದುಸ್ಥಿತಿಯಿಂದಾಗಿ ಪೋಷಕರಲ್ಲಿ ಭಯ ಆವರಿಸಿದ್ದು, ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಶಾಲೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಆಟದ ಮೈದಾನದ ಬಳಿ ಇರುವ ಕೊಠಡಿಗಳಲ್ಲಿ ತರಗತಿ ನಡೆಸಲು ತೀರ್ಮಾನಿಸಲಾಗಿದೆಯಾದರೂ, ಕೇವಲ ಎರಡು ಕೊಠಡಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ: ಮಳೆಗಾಲದಲ್ಲಿ ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ, ಸರ್ಕಾರವು ತಕ್ಷಣವೇ ಅನುದಾನ ಮಂಜೂರು ಮಾಡಿ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
