
ಕಡಬ ತಾಲೂಕಿನ ಬಲ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಭಾರಿ ಮಳೆಯಿಂದಾಗಿ ಮೇಲ್ಭಾಗದ ಕಾಂಪೌಂಡ್ ಗೋಡೆ ಹಾಗೂ ಮಣ್ಣು ಜರಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ತಕ್ಷಣ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ


ಕಡಬ / ಬಲ್ಯ:ಕಡಬ ತಾಲೂಕಿನಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ, ಬಲ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಕಾಂಪೌಂಡ್ ಗೋಡೆ ಹಾಗೂ ಮಣ್ಣು ಜರಿದು ಬಿದ್ದ ಭೀಕರ ಘಟನೆ ನಡೆದಿದೆ.
ಬುಧವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಗೆ ಮೇಲ್ಭಾಗದಲ್ಲಿದ್ದ ಶಾಲಾ ಕಾಂಪೌಂಡ್ ಗೋಡೆ ಹಾಗೂ ಅಪಾರ ಪ್ರಮಾಣದ ಮಣ್ಣು ಬೆಳಿಗ್ಗೆ ಸುಮಾರು 8:00 ಗಂಟೆಯ ವೇಳೆಗೆ ರಸ್ತೆಗೆ ಏಕಾಏಕಿ ಕುಸಿದು ಬಿದ್ದಿದೆ.
ದಿಢೀರ್ ಕಾಂಪೌಂಡ್ ಗೋಡೆ ಹಾಗೂ ಮಣ್ಣು ರಸ್ತೆಗೆ ಬಿದ್ದ ಪರಿಣಾಮವಾಗಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದಾಗಿ ಬೆಳಿಗ್ಗೆ ಶಾಲೆಗೆ ತೆರಳಬೇಕಿದ್ದ ಸಣ್ಣ-ಸಣ್ಣ ವಿದ್ಯಾರ್ಥಿಗಳು ಹಾಗೂ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.


ಪ್ರಸ್ತುತ ಕಡಬ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಮೇಲ್ಭಾಗದಲ್ಲಿರುವ ಮಣ್ಣು ಮತ್ತಷ್ಟು ಸಡಿಲಗೊಂಡು ಮತ್ತೆ ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ತಕ್ಷಣವೇ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕು. ರಸ್ತೆಗೆ ಬಿದ್ದಿರುವ ಕಾಂಪೌಂಡ್ ಗೋಡೆಯ ಅವಶೇಷಗಳು ಹಾಗೂ ಮಣ್ಣನ್ನು ಜೆಸಿಬಿ ಮೂಲಕ ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ಭವಿಷ್ಯದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗದಂತೆ ತಡೆಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
