
ಸುಬ್ರಹ್ಮಣ್ಯ / ಸುಳ್ಯ: ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಹಾಗೂ ಯಾತ್ರಾರ್ಥಿಗಳಿಗೆ ಉತ್ತಮ ವೈದ್ಯಕೀಯ ಸೇವೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ‘ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 24/7 ವೈದ್ಯರ ನೇಮಕ ಹೋರಾಟ ಸಮಿತಿ’ ನಿಯೋಗವು ಹಿರಿಯ ವೈದ್ಯರು ಹಾಗೂ ಕೆ.ವಿ.ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಅವರನ್ನು ಆಗಸ್ಟ್ 12 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿತು.


ಕೆ.ವಿ.ಜಿ ಸಂಸ್ಥೆಯಿಂದ ಆರೋಗ್ಯ ಸೇವೆ ಒದಗಿಸಲು ಮನವಿ: ನಿಯೋಗದ ಸದಸ್ಯರು ಡಾ. ಕೆ.ವಿ. ಚಿದಾನಂದ ಅವರೊಂದಿಗೆ ಚರ್ಚಿಸಿ, ಸುಬ್ರಹ್ಮಣ್ಯ ಪರಿಸರದಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಕೆ.ವಿ.ಜಿ (KVG) ಶಿಕ್ಷಣ ಹಾಗೂ ಆಸ್ಪತ್ರೆ ಸಂಸ್ಥೆಯ ವತಿಯಿಂದ ವಿಶೇಷ ವೈದ್ಯಕೀಯ ಸೇವೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಮ್ಮ ಸುದೀರ್ಘ ವೈದ್ಯಕೀಯ ರಂಗದ ಅನುಭವವನ್ನು ಹಂಚಿಕೊಂಡ ಡಾ. ಕೆ.ವಿ. ಚಿದಾನಂದ ಅವರು, ಸುಬ್ರಹ್ಮಣ್ಯದಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯ ಒದಗಿಸುವ ಕುರಿತು ಹಲವು ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದರು. ಅಲ್ಲದೆ ಸರ್ಕಾರದ ಮಟ್ಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಉಪಸ್ಥಿತರಿದ್ದ ಶಾಸಕರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.


ಈ ಮಹತ್ವದ ಸಭೆಯ ಸಂದರ್ಭದಲ್ಲಿ ಭಾಗೀರಥಿ ಮುರುಳ್ಯ – ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ,ಮುಸ್ತಾಫ (ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು) ವಿಮಲ ರಂಗಯ್ಯ, ಲೀಲಾ ಮನಮೋಹನ, ಶಿವರಾಮ ರೈ, ಗೋಪಾಲ ಎಣ್ಣೆಮಜಲು, ಚಂದ್ರಶೇಖರ ನಾಯರ್, ರವಿ ಕಕ್ಕೆಪದವು, ಗಿರಿಧರ ಸ್ಕಂದ, ಪ್ರಶಾಂತ್ ಕೋಡಿಬೈಲು, ಸುಬ್ರಹ್ಮಣ್ಯ ಅತ್ಯಾಡಿ ಸೇರಿದಂತೆ ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
