
ಕಡಬ ತಾಲೂಕಿನ ಮಾರ್ಧಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಮಿತ್ತೋಡಿಯಿಂದ ಬೊಳ್ಳೂರು ಕ್ರಾಸ್ ಮೂಲಕ ಕೋಡಿಂಬಾಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯ ‘ಕೊಲಂತಾಡಿ’ ಎಂಬಲ್ಲಿ ಮಾವಿನ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದೆ. ಶಾಲಾ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ಈ ರಸ್ತೆಯಲ್ಲಿ ದುರಂತ ಸಂಭವಿಸುವ ಮುನ್ನ ಮರ ತೆರವುಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.


ಕಡಬ ತಾಲೂಕಿನ ಮಾರ್ಧಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ 102 ನೆಕ್ಕಿಲಾಡಿ ಗ್ರಾಮದ ಮಿತ್ತೋಡಿಯಿಂದ ಬೊಳ್ಳೂರು ಕ್ರಾಸ್ ಮೂಲಕ ಕೋಡಿಂಬಾಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯ ‘ಕೊಲಂತಾಡಿ’ ಎಂಬ ಸ್ಥಳದಲ್ಲಿ ರಸ್ತೆ ಬದಿಯಲ್ಲೇ ಬೃಹತ್ ಮಾವಿನ ಮರವೊಂದು ಅಪಾಯಕಾರಿ ಹಂತದಲ್ಲಿ ಬೆಳೆದು ನಿಂತಿದೆ.
ಈ ಬೃಹತ್ ಮಾವಿನ ಮರದ ಕೊಂಬೆಗಳು ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದು, ಬಿರುಗಾಳಿ ಹಾಗೂ ಭಾರಿ ಮಳೆಗೆ ರಸ್ತೆಗೆ ಧರೆಗುರುಳುವ ಹಂತದಲ್ಲಿದೆ. ಈ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಪ್ರತಿದಿನ ಸುಮಾರು 7ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಹಾಗೂ ನೂರಾರು ಸಾರ್ವಜನಿಕ ವಾಹನಗಳು ನಿರಂತರವಾಗಿ ಸಂಚರಿಸುತ್ತವೆ.


ಅಪಾಯಕಾರಿ ಸ್ಥಿತಿಯಲ್ಲಿ ವಾಲಿ ನಿಂತಿರುವ ಈ ಮರ ಹಾಗೂ ತಾಗಿಕೊಂಡಿರುವ ವಿದ್ಯುತ್ ತಂತಿಗಳಿಂದಾಗಿ ಯಾವುದೇ ಕ್ಷಣದಲ್ಲಾದರೂ ಭಾರಿ ಅನಾಹುತ ಸಂಭವಿಸುವ ಮುನ್ಸೂಚನೆ ಕಾಣಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿ ಹಾಗೂ ದುರಂತ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಅಪಾಯಕಾರಿ ಮಾವಿನ ಮರವನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕಡಬ ತಾಲೂಕಿನಾದ್ಯಂತ ಭಾರಿ ಗಾಳಿ ಮಳೆಗೆ ಮರಗಳು ಬಿದ್ದು ಸಾವು-ನೋವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿ ಮರವನ್ನು ತೆರವುಗೊಳಿಸಿ ಸಾರ್ವಜನಿಕ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.
