ಮಣ್ಣಿನ ವಾಸನೆ ಗ್ರಹಿಸಿ, ಕೆಸರಗಿಳಿದು ಭತ್ತದ ನಾಟಿ ಕಲಿತ ವಿದ್ಯಾರ್ಥಿಗಳು

ಸೈಂಟ್ ಜೋಕಿಮ್ಸ್ , ಸೈಂಟ್ ಆನ್ಸ್ ಶಾಲಾ ಮಕ್ಕಳಿಂದ ಸಾಂಪ್ರದಾಯಿಕ ಕೃಷಿ ಸಂಭ್ರಮ

kadaba times

ಕಡಬ:ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಕೃಷಿ ಚಟುವಟಿಕೆಗಳಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ಮಣ್ಣಿನ ನಂಟು ಹಾಗೂ ಸಾಂಪ್ರದಾಯಿಕ ಭತ್ತದ ಬೇಸಾಯದ ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮವೊಂದು ಜರುಗಿದೆ. ಪಠ್ಯಪೂರಕ ಚಟುವಟಿಕೆಗಳ ಭಾಗವಾಗಿ ಇಕೋ ಕ್ಲಬ್ ವತಿಯಿಂದ ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸುವರ್ಣ ನಿಲಯ ಕೋಡಿಬೈಲು ಶ್ರೀಮತಿ ದೇವಕಿ ಪೂಜಾರಿ ಇವರ ಮನೆಯ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ನಾಟಿಯ ಬಗ್ಗೆ ಅಪರೂಪದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

kadaba times
uniq

 “ವಿದ್ಯಾರ್ಥಿಗಳು ಭತ್ತದ ಬೇಸಾಯದ ಕ್ರಮಗಳನ್ನು ಪ್ರಾಯೋಗಿಕವಾಗಿ ತಿಳಿಯಲು ಇದೊಂದು ಸೂಕ್ತ ವೇದಿಕೆಯಾಗಿದೆ. ಗದ್ದೆಯ ಮಣ್ಣಿನೊಂದಿಗೆ ಒಡನಾಟ ಹೊಂದುವುದರಿಂದ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ (Positive) ಪರಿಣಾಮ ಬೀರುವುದಲ್ಲದೆ, ಮಕ್ಕಳ ಸಮಗ್ರ ಬೆಳವಣಿಗೆಯಾಗುತ್ತದೆ. ನೇಜಿ ನಾಟಿಯ ಬಗ್ಗೆ ಹೆಚ್ಚಿನ ಪ್ರಾಯೋಗಿಕ ಕಲಿಕೆಗೆ ಇಂತಹ ಚಟುವಟಿಕೆಗಳು ಉತ್ತಮ ಪೂರಕ ಅವಕಾಶ” – ವಂದನೀಯ ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ  ವಿದ್ಯಾಸ್ಥೆಗಳ ಸಂಚಾಲಕ

ಕೆಸರ ಗದ್ದೆಯಲ್ಲಿ ತರಬೇತಿ ಪಡೆದ ಮಕ್ಕಳು:

ಬೆಳಗ್ಗೆಯೇ ಅತ್ಯಂತ ಉತ್ಸಾಹದಿಂದ ಕೆಸರುಗದ್ದೆಗೆ ಇಳಿದ ವಿದ್ಯಾರ್ಥಿಗಳು, ಗದ್ದೆ ಕೆಲಸದಲ್ಲಿ ದಶಕಗಳ ಅನುಭವ ಹೊಂದಿರುವ ನುರಿತ ಸ್ಥಳೀಯ ಮಹಿಳೆಯರ ನೇರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದರು. ನೇಜಿಯನ್ನು ಹದವಾಗಿ ತೆಗೆಯುವುದು ಹೇಗೆ, ಗದ್ದೆಯಲ್ಲಿ ಸಾಲಾಗಿ ನೇಜಿ ನಾಟಿ ಮಾಡುವ ವಿಧಾನಗಳೇನು ಎಂಬಿತ್ಯಾದಿ ಭತ್ತದ ಕೃಷಿಯ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ಮಕ್ಕಳು ಅತ್ಯಂತ ಆಸಕ್ತಿಯಿಂದ ಪಡೆದುಕೊಂಡರು.

ಸಡಗರ ಮೂಡಿಸಿದ ಕೆಸರುಗದ್ದೆ ಕ್ರೀಡಾಕೂಟ:

ನಾಟಿ ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲೇ ವಿವಿಧ ಮನೋರಂಜನಾ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ (Tug of War), ಹ್ಯಾಂಡ್ ಬಾಲ್ ಹಾಗೂ ವಾಲಿಬಾಲ್ ಆಟಗಳನ್ನು ಕೆಸರಿನಲ್ಲೇ ಆಡಿ ವಿದ್ಯಾರ್ಥಿಗಳು ಪರಸ್ಪರ ಚೀರಾಡುತ್ತಾ ಸಖತ್ ಸಂಭ್ರಮಿಸಿದರು. ಕೃಷಿ ತರಬೇತಿಯೊಂದಿಗೆ ದೈಹಿಕ ಕಸರತ್ತಿಗೂ ಸಾಕ್ಷಿಯಾದ ಈ ದಿನ ಮಕ್ಕಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿತು.

kadaba times
kadaba times

ಈ  ಸಂದರ್ಭದಲ್ಲಿ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್, ಕೋಡಿಬೈಲು ಮನೆಯ ಶ್ರೀಮತಿ ದೇವಕಿ ಹಾಗೂ ಅವರ ಕುಟುಂಬದ ಮಕ್ಕಳು, ಇಕೋ ಕ್ಲಬ್‌ನ ನಿರ್ದೇಶಕರುಗಳು, ದೈಹಿಕ ಶಿಕ್ಷಣ ಶಿಕ್ಷಕ ಸಮದ್, ಸುಪ್ರಿಯಾ ಹಾಗೂ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಗದ್ದೆ ಕೆಲಸ ಹಾಗೂ ಆಟದ ಬಳಿಕ ದಣಿದಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಸುವರ್ಣ ನಿಲಯ ಕೋಡಿಬೈಲು ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಕೋ ಕ್ಲಬ್‌ನ ಈ ನೂತನ ಪ್ರಯತ್ನಕ್ಕೆ ಪೋಷಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Related Articles

Latest Articles