ಮನೆ ದರೋಡೆ ಪ್ರಕರಣ ಆರೋಪಿ ಪುತ್ತೂರಿನಲ್ಲಿ ಬಂಧನ

kadaba times

ಕುಂಬಳೆಯಲ್ಲಿ ಸುಮಾರು 15 ವರ್ಷಗಳ ಹಿಂದೆ ನಡೆದಿದ್ದ ಭೀಕರ ಮನೆ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಪುತ್ತೂರಿನ ಸಂಪ್ಯದಲ್ಲಿ ಬಂಧಿಸಿದ್ದಾರೆ. ಬಂದೂಕು ತೋರಿಸಿ ಕುಟುಂಬಸ್ಥರನ್ನು ಕಟ್ಟಿಹಾಕಿ 42 ಪವನ್ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣದಲ್ಲಿ ಸಂಪ್ಯ ನಿವಾಸಿ ಅಬ್ದುಲ್ ಅಸೀಸ್ ಎಂಬಾತನನ್ನು ಕಾಸರಗೋಡು ಅಪರಾಧ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

kadaba times
uniq

ಪುತ್ತೂರು: ಸುಮಾರು 15 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದ್ದ ಸಂಚಲನಾತ್ಮಕ ಮನೆ ದರೋಡೆ ಪ್ರಕರಣದಲ್ಲಿ ಸುದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಂಪ್ಯ ನಿವಾಸಿ ಅಸೀಸ್ ಅಲಿಯಾಸ್ ಅಬ್ದುಲ್ ಅಸೀಸ್ (58) ಎಂದು ಗುರುತಿಸಲಾಗಿದೆ.

kadaba times
kadaba times

ಪ್ರಕರಣದ ಹಿನ್ನೆಲೆ 

ಡಿಸೆಂಬರ್ 22, 2012ರಂದು ರಾತ್ರಿ ಕಾಸರಗೋಡಿನ ಕುಂಬಳೆ ಅನಿಲ್ ಕುಂಬ್ಳೆ ರಸ್ತೆ ಸಮೀಪದಲ್ಲಿದ್ದ ಮಂಗಳೂರಿನ ಸಾರಿಗೆ ನಿರ್ವಾಹಕ ರಾಜೇಶ್ ಶೆಣೈ ಎಂಬವರ ಮನೆಗೆ ಮುಸುಕುಧಾರಿಗಳ ದರೋಡೆಕೋರರ ತಂಡ ಬಾಗಿಲು ಒಡೆದು ಅಕ್ರಮವಾಗಿ ನುಗ್ಗಿತ್ತು. ಮನೆಯೊಳಗೆ ಪ್ರವೇಶಿಸಿದ ಗ್ಯಾಂಗ್‌ನ ಸದಸ್ಯರು ಬಂದೂಕು ತೋರಿಸಿ ಕುಟುಂಬಸ್ಥರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ ಹಾಗೂ ಚಿನ್ನಾಭರಣ ನೀಡುವಂತೆ ಬೆದರಿಸಿದ್ದರು. ರಾಜೇಶ್ ಶೆಣೈ ಅವರು ಹಣವಿಲ್ಲ ಎಂದಾಗ, ಅವರ ಮುಖಕ್ಕೆ ಮಾದಕ ದ್ರವವೊಂದನ್ನು ಸಿಂಪಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಬಳಿಕ ಕುಟುಂಬದ ಇತರ ಸದಸ್ಯರ ಕೈಗಳನ್ನು ಬೆನ್ನಹಿಂದೆ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ, ಅವರು ಧರಿಸಿದ್ದ 42 ಪವನ್ ಚಿನ್ನಾಭರಣ ಹಾಗೂ ₹25,000 ನಗದನ್ನು ದೋಚಿ ಪರಾರಿಯಾಗಿದ್ದರು. ರಾತ್ರಿ ವೇಳೆ ರಾಜೇಶ್ ಶೆಣೈ ಅವರ ಕುಟುಂಬ ಸ್ನೇಹಿತೆಯಾಗಿದ್ದ ಡಾ. ವಾಣಿ ಎಂಬವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮನೆಗೆ ಬಂದಾಗ ಈ ಭೀಕರ ದರೋಡೆ ಕೃತ್ಯ ಬೆಳಕಿಗೆ ಬಂದಿತ್ತು.

ಪೊಲೀಸರ ಮಿಂಚಿನ ಕಾರ್ಯಾಚರಣೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 10 ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪ್ರಮುಖ ಆರೋಪಿ ಅಬ್ದುಲ್ ಅಸೀಸ್ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದರು. ಇದೀಗ ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್‌ಪಿ ಮಧುಸೂದನ್ ನಾಯರ್ ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್‌ಗಳಾದ ಶ್ರೀಕುಮಾರ್, ಸಂಜಯ್, ಎಸ್‌ಐಗಳಾದ ರವೀಂದ್ರನ್, ಪ್ರಮೋದ್, ವಿನೋದ್ ಹಾಗೂ ಸಿಬ್ಬಂದಿಗಳಾದ ಗೋಪನ್, ರಾಜೀವನ್, ರಾಜೇಶ್ ಮಡಿಕೈ ಮತ್ತು ಚಾಲಕ ರಂಜಿತ್ ಅವರನ್ನೊಳಗೊಂಡ ವಿಶೇಷ ತಂಡವು ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಣೆ ನಡೆಸಿ ಅಸೀಸ್‌ನನ್ನು ಬಂಧಿಸಿದೆ. ಪ್ರಕರಣದಲ್ಲಿ ಇನ್ನುಳಿದ ಮೂವರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಕುಂಬಳೆ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.

Related Articles

Latest Articles