ದಾಸ ಸಾಹಿತ್ಯ ಆಧುನಿಕ ಕಾಲಘಟ್ಟಕ್ಕೂ ಪ್ರಸ್ತುತ: ಸರಸ್ವತೀ ವಿದ್ಯಾಲಯದಲ್ಲಿ ‘ಗುರು ಪೂರ್ಣಿಮೆ’

kadaba times

ಕಡಬದ ಸರಸ್ವತೀ ವಿದ್ಯಾಲಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಸಮಿತಿಯ ಜಂಟಿ ಆಶ್ರಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ “ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿ” ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಚಿಕ್ಕಮಗಳೂರಿನ ಉಪನ್ಯಾಸಕ ಗಣೇಶ ಶೆಂಡ್ಯೆ ಮುಖ್ಯ ಭಾಷಣ ಮಾಡಿದ್ದು, ಸಂಸ್ಥೆಯ ಅಧ್ಯಕ್ಷ ಸದಾಶಿವ ಭಟ್ ಬಿ. ಅಧ್ಯಕ್ಷತೆ ವಹಿಸಿದ್ದರು.

kadaba times
uniq

ದಾಸ ಸಾಹಿತ್ಯ ಎನ್ನುವುದು ಜೀವನ ಮೌಲ್ಯಗಳ ಅಗಾಧ ಗಣಿಯಾಗಿದೆ. ವರ್ಷಾನುಗಟ್ಟಳೆ ಹಿಂದೆ ರಚಿಸಲ್ಪಟ್ಟ ಈ ಮೌಲ್ಯಯುತ ಸಾಹಿತ್ಯಗಳು ಇಂದಿನ ಆಧುನಿಕ ಕಾಲಘಟ್ಟಕ್ಕೂ ಅತ್ಯಂತ ಪ್ರಸ್ತುತವಾಗಿವೆ” ಎಂದು ಚಿಕ್ಕಮಗಳೂರಿನ ಐಡಿಎಸ್‌ಜಿ ಸರಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಗಣೇಶ ಶೆಂಡ್ಯೆ ಅಭಿಪ್ರಾಯಪಟ್ಟರು.

ಕಡಬದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ, ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕದ ಕಡಬ ತಾಲೂಕು ಸಮಿತಿಯ ಸಂಯುಕ್ತ ಆಶ್ರಯದಲ್ಲಿ, ಕೇವಳ ಹನುಮಾನ್ ನಗರದ ಸರಸ್ವತೀ ವಿದ್ಯಾಲಯದ ಯಾದವಶ್ರೀ ಸಭಾಂಗಣದಲ್ಲಿ ಜುಲೈ 29 ರಂದು ಆಯೋಜಿಸಲಾಗಿದ್ದ ‘ಗುರು ಪೂರ್ಣಿಮೆ’ ಕಾರ್ಯಕ್ರಮದಲ್ಲಿ ಅವರು “ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದಾಸ ಸಾಹಿತ್ಯದಲ್ಲಿನ ಪದಗಳನ್ನು ಗಮನವಿಟ್ಟು ಹಾಡಿದರೆ ಅಥವಾ ಆಲಿಸಿದರೆ ನಮಗೆ ಸಿಗುವ ಜೀವನ ಮೌಲ್ಯದ ಸಂದೇಶಗಳು ಅಪಾರವಾದುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ಮೌಲ್ಯಯುತ ಸಾಹಿತ್ಯದಲ್ಲಿ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

kadaba times
kadaba times

ಸಂಸ್ಕಾರಯುತ ಜ್ಞಾನವೇ ಸನ್ಮಾರ್ಗಕ್ಕೆ ದಾರಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸದಾಶಿವ ಭಟ್‌ ಬಿ., “ಗುರು ಎಂದರೆ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗದರ್ಶಕ. ಗುರುವಿನ ದಾರಿದೀಪದಲ್ಲಿ ಸಂಸ್ಕಾರಯುತ ಜ್ಞಾನವನ್ನು ಪಡೆದು ನಾವು ಜೀವನದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಸಂಸ್ಕಾರವಿಲ್ಲದ ಯಾವುದೇ ಶೈಕ್ಷಣಿಕ ಪದವಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯಪೂರಕ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು” ಎಂದರು.

ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಅವರು ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಕಾರ್ಯದರ್ಶಿ ನಾಗರಾಜ್ ಎನ್.ಕೆ., ಸರಸ್ವತೀ ವಿದ್ಯಾಲಯ ಕನ್ನಡ ಮಾಧ್ಯಮ ವಿಭಾಗದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್, ಆಂಗ್ಲ ಮಾಧ್ಯಮ ವಿಭಾಗದ ಸಂಚಾಲಕ ಅಜಿತ್ ರೈ ಎ., ಮುಖ್ಯ ಶಿಕ್ಷಕ ವಸಂತ ಕೆ., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್., ಪ್ರಮುಖರಾದ ವಸುಧಾ ಗೋಗಟೆ, ಕಾಶಿನಾಥ್ ಗೋಗಟೆ ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಪೂರ್ವಿ ಸ್ವಾಗತಿಸಿ, ಯಕ್ಷಿತ್ ವಂದಿಸಿದರು. ಸೌಮ್ಯ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.

Related Articles

Latest Articles