
ಕಡಬ-ಪಂಜ ರಸ್ತೆಯ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಧರ್ಮಸ್ಥಳದಿಂದ ಬೀದಿಗುಡ್ಡೆಗೆ ತೆರಳುತ್ತಿದ್ದ KSRTC ಸರ್ಕಾರಿ ಬಸ್ ಚರಂಡಿಗೆ ಇಳಿದು ಭಾರಿ ಅನಾಹುತವೊಂದು ತಪ್ಪಿದೆ. ರಸ್ತೆ ಬದಿಯ ಚರಂಡಿಗಳು ಗಿಡಗಂಟಿಗಳಿಂದ ಮುಚ್ಚಿಹೋಗಿದ್ದರೂ ಯಾವುದೇ ಕ್ರಮಕೈಗೊಳ್ಳದ ಲೋಕೋಪಯೋಗಿ ಇಲಾಖೆಯ (PWD) ಭಾರಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ


ಕಡಬ-ಪಂಜ ರಾಜ್ಯ ಹೆದ್ದಾರಿಯ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬ ಅಪಾಯಕಾರಿ ರಸ್ತೆ ತಿರುವಿನಲ್ಲಿ ಜುಲೈ 31ರ ಸಂಜೆ ಧರ್ಮಸ್ಥಳ- ಬೀದಿಗುಡ್ಡೆ ಕಡೆಗೆ ತೆರಳುತ್ತಿದ್ದ KSRTC ಸರ್ಕಾರಿ ಬಸ್ಸೊಂದು ಚರಂಡಿಗೆ ಇಳಿದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಡಬ-ಪಂಜ ರಸ್ತೆಯುದ್ದಕ್ಕೂ ರಸ್ತೆ ಬದಿಯ ಚರಂಡಿಗಳು ಗಿಡಗಂಟಿ, ಪೊದೆಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿವೆ. ಚರಂಡಿ ಎಲ್ಲಿದೆ, ರಸ್ತೆ ಅಂಚು ಎಲ್ಲಿದೆ ಎಂದು ತಿಳಿಯದಷ್ಟು ದುಸ್ಥಿತಿಯಲ್ಲಿದೆ. ಪುಳಿಕುಕ್ಕುವಿನ ಈ ನಿರ್ದಿಷ್ಟ ರಸ್ತೆ ತಿರುವಿನಲ್ಲಿ ಇದೇ ಮೊದಲೇನೂ ವಾಹನಗಳು ಚರಂಡಿಗೆ ಉರುಳಿಲ್ಲ, ಈ ಹಿಂದೆ ಹಲವು ಘನ ವಾಹನಗಳು (ಲಾರಿ, ಬಸ್) ಇದೇ ರೀತಿ ಚರಂಡಿಗೆ ಬಿದ್ದು ಅಪಾಯ ತಂದೊಡ್ಡಿದ್ದವು.
ಪದೇ ಪದೇ ಇಂತಹ ಅಪಾಯಕಾರಿ ಘಟನೆಗಳು ಕಣ್ಣೆದುರೇ ನಡೆಯುತ್ತಿದ್ದರೂ, ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಕನಿಷ್ಠ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಚರಂಡಿ ಹಾಗೂ ತಿರುವುಗಳನ್ನು ಸರಿಪಡಿಸುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ .


ಅನಾಹುತ ನಡೆಯುವ ಮುನ್ನ ಎಚ್ಚರಗೊಳ್ಳಲಿ ಇಲಾಖೆ
“ಒಂದು ವೇಳೆ ಬಸ್ ಮಗುಚಿ ಬಿದ್ದಿದ್ದರೆ ಅಥವಾ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದ್ದರೆ ಯಾರು ಹೊಣೆ? ಪ್ರಯಾಣಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವೇ?” ಎಂದು ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರು ಲೋಕೋಪಯೋಗಿ ಇಲಾಖೆಯನ್ನು ಪ್ರಶ್ನಿಸಿದ್ದಾರೆ.
ಸಂಬಂಧಪಟ್ಟ PWD ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಸ್ತೆ ಬದಿಯ ಅಪಾಯಕಾರಿ ಗಿಡಗಂಟಿಗಳನ್ನು ತೆರವುಗೊಳಿಸಿ, ಚರಂಡಿಗಳನ್ನು ದುರಸ್ತಿಪಡಿಸಬೇಕು ಹಾಗೂ ಅಗತ್ಯವಿರುವ ಕಡೆ ಎಚ್ಚರಿಕೆ ಫಲಕ (Warning Boards) ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
