
ಕಡಬ: ಉಪ್ಪಿನಂಗಡಿಯಲ್ಲಿ ಕೆಲಸಕ್ಕೆಂದು ತೆರಳಿ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎನ್ನಲಾಗಿದ್ದ ಕಡಬ ಕಳಾರದ ಅಡ್ಪಾಡಿ ನಿವಾಸಿ ಮಹಮ್ಮದ್ ಅಕ್ಬರ್ (21) ಅವರು ಸುರಕ್ಷಿತವಾಗಿ ಮನೆಗೆ ಹಿಂತಿರುಗಿದ್ದಾರೆ.


ಈ ಕುರಿತು ಕಡಬ ಪೊಲೀಸ್ ಠಾಣೆಗೆ ಹಾಜರಾಗಿರುವ ಯುವಕ, ತಾವು ಕಾಣೆಯಾಗಿರಲಿಲ್ಲ; ಕೆಲಸದ ಹುಡುಕಾಟಕ್ಕಾಗಿ ಯಾರಿಗೂ ತಿಳಿಸದೆ ಬೆಂಗಳೂರಿಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾರೆ. ಯುವಕ ನೀಡಿರುವ ಹೇಳಿಕೆಯ ಪ್ರಕಾರ “ನಾನು ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದು, ಪ್ರಸ್ತುತ ಮನೆಯಲ್ಲಿಯೇ ಇರುತ್ತಿದ್ದೆ. ಇತ್ತೀಚೆಗೆ ಉಪ್ಪಿನಂಗಡಿಯ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೆ. ತಿಂಗಳ ಕೊನೆಯಲ್ಲಿ ಸಂಪಾದನೆ ಕಡಿಮೆಯಾಗುತ್ತಿದ್ದ ಕಾರಣ, ಬೇರೆ ಎಲ್ಲಾದರೂ ಕೆಲಸ ಹುಡುಕಿಕೊಳ್ಳುವಂತೆ ತಂದೆ-ತಾಯಿ ಹೇಳುತ್ತಿದ್ದರು. ಆದರೆ ನನಗೆ ಪರಿಚಯದವರು ಯಾರೂ ಇರದ ಕಾರಣ, ಜುಲೈ 16ರಂದು ಬೆಳಿಗ್ಗೆ ಬಟ್ಟೆಗಳನ್ನು ಹಾಗೂ ದಾಖಲೆಗಳನ್ನು ತೆಗೆದುಕೊಂಡು ಯಾರಿಗೂ ತಿಳಿಸದೆ ಬೆಂಗಳೂರಿಗೆ ಹೊರಟಿದ್ದೆ.”


ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿ ಕೆಲಸ ಸಿಗದಿದ್ದ ಕಾರಣ ಜುಲೈ 19ರಂದು ರಾತ್ರಿ ಬೆಂಗಳೂರಿನಿಂದ ರೈಲು ಹತ್ತಿ, ಜುಲೈ 20ರಂದು ಬೆಳಿಗ್ಗೆ ಕಡಬಕ್ಕೆ ವಾಪಸ್ ಬಂದಿರುವುದಾಗಿ ತಿಳಿಸಿದ್ದಾರೆ. ಮನೆಗೆ ಬಂದ ಮೇಲೆಯೇ ತಮ್ಮ ತಂದೆ ಅಬ್ದುಲ್ ರಶೀದ್ ಅವರು ಕಡಬ ಪೊಲೀಸ್ ಠಾಣೆಗೆ ‘ಗಂಡಸು ಕಾಣೆ’ ದೂರು ನೀಡಿರುವ ವಿಷಯ ತಿಳಿದಿದೆ. ಹೀಗಾಗಿ ಅವರು ತಮ್ಮ ತಂದೆಯೊಂದಿಗೆ ಕಡಬ ಪೊಲೀಸ್ ಠಾಣೆಗೆ ಹಾಜರಾಗಿ, “ನಾನು ತಂದೆಗೆ ತಿಳಿಸದೇ ಹೊರಟು ಹೋಗಿದ್ದೆ, ಇನ್ಮುಂದೆ ಎಲ್ಲೂ ಹೋಗುವುದಿಲ್ಲ” ಎಂದು ಹೇಳಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಪೊಲೀಸರಲ್ಲಿ ವಿನಂತಿಸಿದ್ದಾರೆ.
