ಕೋರಿಯಾರ್‌ ಗೆ ಶೀಘ್ರದಲ್ಲೇ ಸಚಿವರನ್ನು ಕರೆಸಿ ಶಂಕುಸ್ಥಾಪನೆ

ಸುಳ್ಯ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಜಿ. ಕೃಷ್ಣಪ್ಪ ರಾಮಕುಂಜ

kadaba times

ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಎಂಬಲ್ಲಿ ಕುಮಾರಧಾರ ನದಿಗೆ ‘ಕೋರಿಯಾರ್ – ಬಳ್ಪ’ ಆದರ್ಶ ಗ್ರಾಮಗಳ ಸಂಪರ್ಕ ಸೇತುವೆ ಕಾಮಗಾರಿಗೆ 36 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಕೆ.ಪಿ.ಸಿ.ಸಿ. ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಜಿ. ಕೃಷ್ಣಪ್ಪ ರಾಮಕುಂಜ ತಿಳಿಸಿದ್ದಾರೆ.

kadaba times
uniq

ಶನಿವಾರ ಕಡಬದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೋರಿಯಾರ್‌ನಲ್ಲಿ ಸೇತುವೆ ನಿರ್ಮಾಣದ ಅಗತ್ಯತೆಯನ್ನು ಸ್ಥಳೀಯರು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೆ. ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅನುದಾನ ಮಂಜೂರಾತಿಗೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಬೃಹತ್ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಸಚಿವರನ್ನು ಕರೆಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು” ಎಂದು ಹೇಳಿದರು.

ಸುಳ್ಯ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಸುಳ್ಯ ಕ್ಷೇತ್ರಕ್ಕೆ ಗರಿಷ್ಠ ಅನುದಾನ ತಂದು ಅಭಿವೃದ್ಧಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ ಕೃಷ್ಣಪ್ಪ, ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾದ ವಿವಿಧ ಯೋಜನೆಗಳ ವಿವರ ನೀಡಿದರು. ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ತರಗತಿಗಳನ್ನು ಶೀಘ್ರ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡ ನವೀಕರಣಕ್ಕೆ ₹10 ಕೋಟಿ ಮಂಜೂರಾಗಿದೆ. ಕ್ಷೇತ್ರ ವ್ಯಾಪ್ತಿಯ ಕೊಣಾಲು, ಪಂಜ ಹಾಗೂ ಸುಳ್ಯಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಮಂಜೂರಾಗಿದೆ. ಕೊಯಿಲದಲ್ಲಿ ₹13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 33 ಕೆವಿ ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ರಸ್ತೆ ಮತ್ತು ಸೇತುವೆ ಅಭಿವೃದ್ಧಿ: ಪಾದೆಮಜಲು, ನೇಲ್ಯಡ್ಕ ಹಾಗೂ ನೆಲ್ಯಾಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ₹1 ಕೋಟಿ ಅನುದಾನ,ಸುಂಕದಕಟ್ಟೆ – ಓಟೆಕಜೆ ರಸ್ತೆ ಅಭಿವೃದ್ಧಿಗೆ ₹50 ಲಕ್ಷ, ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ₹2 ಕೋಟಿ,ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಕೋಟೆಬಾಗಿಲು ಎಂಬಲ್ಲಿ ₹4.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ,ಮಜ್ಜಾರು ಕಡವಿನಲ್ಲಿ ಕಿಂಡಿ ಅಣೆಕಟ್ಟು ಸಮೇತ ಸೇತುವೆ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

kadaba times
kadaba times

ಕಡಬದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣ ನಿರ್ಮಾಣಕ್ಕೆ ಜಾಗದ ಅಭಾವವಿದ್ದು, ಕಡಬದ ಕೆರೆಯ ಜಾಗವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆಲ್ಯಾಡಿ ಬಸ್ ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗಿದ್ದು, ಕೊಂಬಾರು ಹಾಗೂ ಮಣಿಬಾಂಢ ಪ್ರದೇಶಗಳಿಗೆ ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.“ನಾವು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಕ್ಷೇತ್ರದ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದೇ ನಮ್ಮ ಪ್ರಮುಖ ಗುರಿ” ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಪಿ. ವರ್ಗೀಸ್, ಬಾಲಕೃಷ್ಣ ಗೌಡ ಬಳ್ಳೇರಿ, ಸತೀಶ್ ಶೆಟ್ಟಿ ಬೀರುಕ್ಕು, ಶಾಕಿರ್ ಮಹಮ್ಮದ್, ಭವಾನಿಶಂಕರ್, ಪ್ರಮೋದ್ ರೈ ಕಾಯಂಬಾಡಿ, ಈರೇಶ್ ಗೌಡ, ಗೋಪಿನಾಥ್ ಕಡಬ, ಎ.ಕೆ. ಬಶೀರ್ ಆತೂರು, ಅಶೋಕ್ ನೆಕ್ರಾಜೆ, ಗಣೇಶ್ ಕೈಕುರೆ, ಪ್ರಮುಖರಾದ ವೆಂಕಪ್ಪ ಗೌಡ ಕಾಯಂಬಾಡಿ, ನಿರಂಜನ್, ಯಶೋಧರ, ಯಶವಂತ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

Latest Articles