
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಬಸ್ ನಿಲ್ದಾಣದಲ್ಲಿ ಸರ್ಕಾರಿ (KSRTC) ಬಸ್ಗಳನ್ನು ಅವೈಜ್ಞಾನಿಕವಾಗಿ ರಸ್ತೆ ತಿರುವಿನಲ್ಲೇ ನಿಲ್ಲಿಸುತ್ತಿರುವುದರಿಂದ ಭಾರಿ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ಸುಬ್ರಹ್ಮಣ್ಯ-ಪಂಜ ತಿರುಗುವ ಮುಖ್ಯ ರಸ್ತೆಯಲ್ಲೇ ಬಸ್ಸುಗಳು ನಿಲ್ಲುತ್ತಿರುವುದರಿಂದ ಚಾಲಕರಿಗೆ ಹಾಗೂ ರಸ್ತೆ ದಾಟುವ ಸಾರ್ವಜನಿಕರಿಗೆ ಎದುರಿನ ವಾಹನಗಳು ಕಾಣಿಸುತ್ತಿಲ್ಲ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.


ಕಡಬ: ಕಡಬ ಪೇಟೆಯ ಪ್ರಮುಖ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ (KSRTC) ಬಸ್ ಚಾಲಕರ ಅವೈಜ್ಞಾನಿಕ ನಿಲುಗಡೆಯಿಂದಾಗಿ ಅಪಘಾತ ಸಂಭವಿಸುವ ಭೀತಿ ನಿರ್ಮಾಣವಾಗಿದೆ.
ಕಡಬದಿಂದ ಪಂಜ, ಬೆಳ್ಳಾರೆ ಹಾಗೂ ಸುಳ್ಯ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಗಳನ್ನು ಚಾಲಕರು ಜಂಕ್ಷನ್ನ ತಿರುವಿನ ಮೇಲೆಯೇ ನಿಲ್ಲಿಸುತ್ತಿರುವುದು ಸಾರ್ವಜನಿಕರ ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣದ ಎದುರುಗಡೆ ಸಾಕಷ್ಟು ಖಾಲಿ ಜಾಗ ಲಭ್ಯವಿದ್ದರೂ, ಚಾಲಕರು ಕಡಬ-ಸುಬ್ರಹ್ಮಣ್ಯ ರಸ್ತೆಯಿಂದ ಪಂಜ ರಸ್ತೆಗೆ ತಿರುಗುವ ಜಂಕ್ಷನ್ನಲ್ಲೇ ಬಸ್ಗಳನ್ನು ನಿಲ್ಲಿಸುತ್ತಿದ್ದಾರೆ. ಬಸ್ಸಿನ ಹಿಂಭಾಗದ ಚಕ್ರಗಳು ಸುಬ್ರಹ್ಮಣ್ಯ ರಸ್ತೆಯಲ್ಲಿದ್ದರೆ, ಮುಂಭಾಗವು ಪಂಜ ರಸ್ತೆಗೆ ಮುಖ ಮಾಡಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗುತ್ತಿದೆ.


ಸುಬ್ರಹ್ಮಣ್ಯ ಕಡೆಯಿಂದ ಬರುವ ವಾಹನ ಸವಾರರಿಗೆ ಪಂಜ ರಸ್ತೆಯಿಂದ ಬರುವ ವಾಹನಗಳು ಅಥವಾ ರಸ್ತೆ ದಾಟುವ ಸಾರ್ವಜನಿಕರು ಕಣ್ಣಿಗೆ ಕಾಣಿಸುವುದಿಲ್ಲ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಮಾರ್ಗವಾಗಿ ಸಂಚರಿಸುವ ಬಸ್ಸುಗಳಿಗಾಗಿ ರಸ್ತೆ ದಾಟಲು ಕಾಯುವ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮುನ್ನವೇ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ಕಡಬದಿಂದ ಪಂಜ, ಬೆಳ್ಳಾರೆ ಹಾಗೂ ಸುಳ್ಯ ಕಡೆಗೆ ತೆರಳುವ ಬಸ್ಗಳನ್ನು ಜಂಕ್ಷನ್ನಿಂದ ಸ್ವಲ್ಪ ಮುಂಭಾಗಕ್ಕೆ ಒಯ್ದು, ಪಂಜ ರಸ್ತೆಯಲ್ಲೇ ಸರಿಯಾದ ಜಾಗದಲ್ಲಿ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಂಚಾರ ಸುಗಮಗೊಳಿಸಿ ಅಪಘಾತಗಳನ್ನು ತಡೆಯಬೇಕೆಂದು ಕಡಬದ ಜಾಗೃತ ಸಾರ್ವಜನಿಕರು ಸಾರಿಗೆ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
