
ಸುಬ್ರಹ್ಮಣ್ಯ: ರಾಜ್ಯ ಸರ್ಕಾರದ ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ. ರೇವಣ್ಣ ಅವರು ಸೋಮವಾರ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ಕ್ಷೇತ್ರಕ್ಕೆ ಆಗಮಿಸಿದ ರೇವಣ್ಣ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಅವರು ಗೌರವಪೂರ್ವಕವಾಗಿ ಬರಮಾಡಿಕೊಂಡರು.
ವಿಶೇಷ ಪೂಜೆ, ಭೋಜನ ಪ್ರಸಾದ ಸ್ವೀಕಾರ: ದೇವಸ್ಥಾನದಲ್ಲಿ ನಡೆದ ಪಂಚಾಮೃತ ಮಹಾಭಿಷೇಕ ಸೇವೆಯಲ್ಲಿ ಭಾಗಿಯಾದ ಎಚ್.ಡಿ. ರೇವಣ್ಣ ಅವರು, ದೇವರ ಮಹಾಮಂಗಳಾರತಿ ವೀಕ್ಷಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಬಳಿಕ ದೇವಸ್ಥಾನದ ಭೋಜನ ಶಾಲೆಯಲ್ಲಿ ಭೋಜನ ಪ್ರಸಾದವನ್ನು ಸ್ವೀಕರಿಸಿದರು.


ಸುಬ್ರಹ್ಮಣ್ಯ ಮಠಕ್ಕೆ ಭೇಟಿ – ಸ್ವಾಮೀಜಿ ಆಶೀರ್ವಾದ: ದೇವಸ್ಥಾನದ ದರ್ಶನದ ನಂತರ ಮಾಜಿ ಸಚಿವ ರೇವಣ್ಣ ಅವರು ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ರೇವಣ್ಣ ಅವರಿಗೆ ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ದ.ಕ. ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಪ್ರಿಯಾ ಸಾಲಿಯನ್, ಜೆಡಿಎಸ್ ಮುಖಂಡರಾದ ದಿವಾಕರ ಬೆಂಗಳೂರು, ಜಯಂತ ಪಂಬತ್ತಾಡಿ ಹಾಗೂ ಬಿಜೆಪಿ ಮುಖಂಡ ಸಂತೋಷ್ ಜಾಕೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
