ಕೊಯಿಲ ಬಳಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರ

kadaba times

ಕಡಬ/ಉಪ್ಪಿನಂಗಡಿ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಬುಧವಾರ ಸಾಯಂಕಾಲ  ದುರಂತವೊಂದು  ತಪ್ಪಿದೆ.  ರಸ್ತೆಯಂಚಿನಲ್ಲಿದ್ದ ಅಕೇಶಿಯ ಜಾತಿಯ ಮರವೊಂದು ಏಕಾಏಕಿ ಬುಡ ಸಮೇತ ರಸ್ತೆಗೆ ಧರಶಾಯಿಯಾಗಿದ್ದು, ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟಿ ಸವಾರರೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

kadaba times
uniq

ಸ್ಕೂಟರ್ ಮೇಲೆ ಬಿದ್ದ ಮರ:

ಘಟನೆಯಲ್ಲಿ ಆತೂರು ಪೇಟೆಯಲ್ಲಿರುವ ಪ್ರಸಿದ್ಧ ‘ಡಿಲೈಟ್ ಹಾರ್ಡ್‌ವೇರ್’ ಅಂಗಡಿಯ ಮಾಲೀಕ ಇಕ್ಬಾಲ್ ಎನ್.ಎ. ಅವರು ಗಾಯಗೊಂಡಿದ್ದಾರೆ.  ಕುಂಡಾಜೆಯಲ್ಲಿರುವ ತನ್ನ  ನಿವಾಸದಿಂದ ಆತೂರಿನಲ್ಲಿರುವ ಅಂಗಡಿಯತ್ತ ಸ್ಕೂಟಿಯಲ್ಲಿ ತೆರಳುತ್ತಿದ್ದರು.  ಗೋಳಿತ್ತಡಿ ತಲುಪುತ್ತಿದ್ದಂತೆ ಹೆದ್ದಾರಿ ಬದಿಯಲ್ಲಿದ್ದ ಅಕೇಶಿಯ ಮರ ಏಕಾಏಕಿ ಇವರ ಸ್ಕೂಟರ್ ಮೇಲೆಯೇ ಬಿದ್ದಿದೆ. ಮರ ಬೀಳುತ್ತಿದ್ದಂತೆ ಇಕ್ಬಾಲ್ ಅವರು ಸಮಯಪ್ರಜ್ಞೆಯಿಂದ ಪಾರಾಗಲು ಯತ್ನಿಸಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಆದರೆ, ಘಟನೆಯ ತೀವ್ರತೆಗೆ ಅವರ ಸ್ಕೂಟರ್‌ಗೆ ಭಾರಿ ಹಾನಿಯಾಗಿದೆ. ಗಾಯಾಳು ಇಕ್ಬಾಲ್ ಅವರನ್ನು ತಕ್ಷಣವೇ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲವೇ ಸೆಕೆಂಡುಗಳ ಅಂತರ; ತಪ್ಪಿದ ಭಾರಿ ದುರಂತ:

ಮರ ಧರೆಶಾಹಿಯಾಗುವ ಕೇವಲ ಕೆಲವೇ ಸೆಕೆಂಡುಗಳ ಮುನ್ನವಷ್ಟೇ ಅದೇ ರಸ್ತೆಯಲ್ಲಿ ಕಾರೊಂದು ವೇಗವಾಗಿ ಹಾದು ಹೋಗಿತ್ತು. ಆ ಕಾರು ದಾಟಿದ ತಕ್ಷಣವೇ ಮರ ಬಿದ್ದಿರುವುದರಿಂದ ಕಾರಿನಲ್ಲಿದ್ದವರೂ ಕೂದಲೆಳೆ ಅಂತರದಲ್ಲಿ ಭಾರಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಭೀತಿಯಿಂದ ತಿಳಿಸಿದ್ದಾರೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು.

kadaba times
kadaba times

ಸ್ಥಳೀಯರಿಂದ ತಕ್ಷಣದ ತೆರವು ಕಾರ್ಯಾಚರಣೆ:

ರಾಜ್ಯ ಹೆದ್ದಾರಿಗೆ ಅಡ್ಡಲಾಗಿ  ಮರ ಬಿದ್ದ ಕಾರಣ ಉಪ್ಪಿನಂಗಡಿ ಹಾಗೂ ಕಡಬ ನಡುವಿನ ವಾಹನ ಸಂಚಾರ ಕೆಲಕಾಲ ಸಂಪೂರ್ಣವಾಗಿ ವ್ಯತ್ಯಯಗೊಂಡಿತು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಸ್ವಯಂಪ್ರೇರಿತರಾಗಿ ಮರದ ಕೊಂಬೆಗಳನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹೆದ್ದಾರಿ ಬದಿಗಳಲ್ಲಿ ಒಣಗಿ ನಿಂತಿರುವ ಇಂತಹ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತಕ್ಷಣ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Latest Articles