ಕಡಬ ಕೆಡಿಪಿ ಸಭೆ: ಬಸ್ ನಿಲ್ದಾಣ ಜಾಗದ ಕಿರಿಕ್, ಆಸ್ಪತ್ರೆ ಭೂಮಿ ಒತ್ತುವರಿ ಅಧಿಕಾರಿಗಳಿಗೆ ಸುಳ್ಯ ಶಾಸಕಿ ಹೇಳಿದ್ದೇನು?

kadaba times

ಕಡಬ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ನಡೆಯಿತು. ಸಭೆಯಲ್ಲಿ ಕಡಬ ತಾಲೂಕಿನ ಬಸ್ ನಿಲ್ದಾಣ ಜಾಗದ ಸಮಸ್ಯೆ, ಆಸ್ಪತ್ರೆ ಜಮೀನು ಒತ್ತುವರಿ, ಸುಬ್ರಹ್ಮಣ್ಯದ ಸ್ವಚ್ಛತೆ ಹಾಗೂ ಕಂದಾಯ ಇಲಾಖೆಯ ಸರ್ವೆ ವಿಳಂಬದ ಕುರಿತು ಬಿಸಿಬಿಸಿ ಚರ್ಚೆಗಳು ನಡೆದವು.

kadaba times
uniq

 ಕಡಬ ಬಸ್ ನಿಲ್ದಾಣಕ್ಕೆ ಬದಲಿ ಜಾಗದ ಪ್ರಸ್ತಾವನೆ: ಸಭೆಯಲ್ಲಿ ಮಾಹಿತಿ ನೀಡಿದ ಕಡಬ ತಾಲೂಕು ಆಡಳಿತ ಕಚೇರಿಯ ಉಪತಹಶೀಲ್ದಾರ್ ಸಯ್ಯುದುಲ್ ಖಾನ್, “ಕಡಬದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕಾಗಿ ಕೋಡಿಂಬಾಳ ಗ್ರಾಮದ ಸರ್ವೆ ನಂ. ೧೪೩/೧ಎ ರಲ್ಲಿ ಗುರುತಿಸಲಾಗಿದ್ದ ೨.೮೩ ಎಕರೆ ಜಾಗಕ್ಕೆ ಸದ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದೆ. ಇದರೊಂದಿಗೆ ಈ ಜಾಗಕ್ಕೆ ಸಂಪರ್ಕಿಸುವ ರಸ್ತೆಯೂ ಕಿರಿದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ, ಬದಲಿ ಜಮೀನಾಗಿ ಕೋಡಿಂಬಾಳ ಗ್ರಾಮದ ಸರ್ವೆ ನಂ. ೧೯/೩ಎ ರಲ್ಲಿ ೧.೧೦ ಎಕರೆ ಜಾಗವನ್ನು ಗುರುತಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ (AC) ಪ್ರಸ್ತಾವನೆ ಸಲ್ಲಿಸಲಾಗಿದೆ,” ಎಂದರು.

ಈ ವಿಷಯವಾಗಿ ಮಧ್ಯಪ್ರವೇಶಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಎರಡು ಜಾಗಗಳನ್ನೂ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಕಾದಿರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಜಾಗ ಒತ್ತುವರಿಯಾಗಿರುವ ಆರೋಪಕ್ಕೆ ಉತ್ತರಿಸಿದ ಉಪತಹಶೀಲ್ದಾರ್, ಸಾರಿಗೆ ಸಂಸ್ಥೆಯಿಂದ ಅಧಿಕೃತ ಮನವಿ ಬಂದರೆ ತಕ್ಷಣ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಸುಬ್ರಹ್ಮಣ್ಯ ಆಸ್ಪತ್ರೆ ಜಾಗ ಒತ್ತುವರಿ: ಹೋರಾಟದ ಎಚ್ಚರಿಕೆ: ಕುಕ್ಕೆ ಸುಬ್ರಹ್ಮಣ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಜಾಗ ಒತ್ತುವರಿಯಾಗಿರುವ ಬಗ್ಗೆ ಕೆಡಿಪಿ ಸದಸ್ಯ ಶಿವರಾಮ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಆಸ್ಪತ್ರೆಗೆ ದಾಖಲೆಗಳ ಪ್ರಕಾರ ೪.೫೦ ಎಕರೆ ಭೂಮಿ ಇದೆ. ಆದರೆ ಪ್ರಸ್ತುತ ಅಳತೆ ಮಾಡುವಾಗ ಕೇವಲ ೨.೯೦ ಎಕರೆ ಮಾತ್ರ ಸಿಗುತ್ತಿದೆ. ಬಾಕಿ ಜಾಗ ಒತ್ತುವರಿಯಾಗಿದೆ,” ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಉಪತಹಶೀಲ್ದಾರ್, ಸರ್ಕಾರದ ಸುತ್ತೋಲೆಯಂತೆ ಈ ಜಮೀನಿನ ಪೋಡಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಶಿವರಾಮ ರೈ ಎಚ್ಚರಿಕೆ ನೀಡಿದರು.

ಕಡಬ ಆಸ್ಪತ್ರೆ ಮೇಲ್ದರ್ಜೆಗೆ; ಉಪ್ಪಿನಂಗಡಿಯಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಒತ್ತಾಯ: ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, “ಕಡಬ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ರಾಜ್ಯ ಮಟ್ಟದ ಶಿಫಾರಸ್ಸಿನಲ್ಲಿದ್ದು, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುವ ನಿರೀಕ್ಷೆಯಿದೆ. ಆದರೆ, ಪ್ರಸ್ತುತ ಇಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತೀವ್ರ ಒತ್ತಡವಿದೆ. ಹಾಗಾಗಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯಲ್ಲೂ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಸರ್ಕಾರಿ ಮಟ್ಟದಲ್ಲಿ ಒpriority ನೀಡಬೇಕು,” ಎಂದು ಕೋರಿದರು. ಹಳೆಯ ಪ್ರಾಥಮಿಕ ಕಟ್ಟಡ ತೆರವುಗೊಳಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದೂ ಅವರು ತಿಳಿಸಿದರು.

ಸುಬ್ರಹ್ಮಣ್ಯ ವ್ಯಾಪ್ತಿಯ ಸಮಸ್ಯೆಗಳ ಸುರಿಮಳೆ: ಕೆಡಿಪಿ ಸದಸ್ಯ ಶಿವರಾಮ ರೈ ಸಭೆಯಲ್ಲಿ ಸುಬ್ರಹ್ಮಣ್ಯ ಭಾಗದ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿದರು:ಸುಬ್ರಹ್ಮಣ್ಯದಲ್ಲಿ ಉದ್ಘಾಟನೆಯಾಗಿರುವ ಶಿಶುಪಾಲನಾ ಕೇಂದ್ರಕ್ಕೆ ಸ್ವಂತ ಕಟ್ಟಡ ಒದಗಿಸಬೇಕು.ಕುಕ್ಕೆ ಕ್ಷೇತ್ರದ ಸುತ್ತಮುತ್ತಲಿನ ಹೋಟೆಲ್ ಹಾಗೂ ರಸ್ತೆಬದಿ ವ್ಯಾಪಾರಿಗಳು ಒಳಚರಂಡಿಗೆ ದ್ರವತ್ಯಾಜ್ಯ ಬಿಡುತ್ತಿದ್ದು, ಇದಕ್ಕೆ ಗ್ರಾ.ಪಂ. ಕಡಿವಾಣ ಹಾಕಬೇಕು ಮತ್ತು ಅನಧಿಕೃತ ಅಂಗಡಿಗಳನ್ನು ಮುಚ್ಚಿಸಬೇಕು. ಆಹಾರ ನಿರೀಕ್ಷಕರು ನಿಯಮಿತವಾಗಿ ತಪಾಸಣೆ ನಡೆಸಬೇಕು.

kadaba times
kadaba times

ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಮೆಸ್ಕಾಮ್ ವತಿಯಿಂದ ರಾತ್ರಿ ಪಾಳಿಯ ವಿಶೇಷ ಕಾರ್ಯಪಡೆ (Team) ನಿಯೋಜಿಸಬೇಕು.ಸವಣೂರು ಮತ್ತು ಬಿಳಿನೆಲೆ ರಾಜ್ಯ ಹೆದ್ದಾರಿಯಲ್ಲಿರುವ ಅಪಾಯಕಾರಿ ಹಂಪ್ಸ್‌ಗಳನ್ನು ತಕ್ಷಣ ತೆರವುಗೊಳಿಸಬೇಕು. ಕುಮಾರಪರ್ವತ ಚಾರಣಿಗರಿಗೆ ವಿಧಿಸಲಾಗಿರುವ ‘ಒಂದೇ ದಿನದಲ್ಲಿ ಚಾರಣ ಮುಗಿಸಬೇಕು’ ಎಂಬ ಕಠಿಣ ಷರತ್ತನ್ನು ಸಡಿಲಿಸಬೇಕು ಮತ್ತು ಮೀಸಲು ಅರಣ್ಯದೊಳಗೆ ಯಾವುದೇ ಅಕ್ರಮ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಆಗ್ರಹಿಸಿದರು.

ಶಾಲೆಗೆ ರಸ್ತೆ ಇಲ್ಲ; ಜಂಟಿ ಸರ್ವೆ ವಿಳಂಬಕ್ಕೆ ಆಕ್ರೋಶ :ಕಡಬದ ಮೌಲಾನಾ ಆಜಾದ್ ಮಾದರಿ ಶಾಲೆಯು ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ನಡೆಯುತ್ತಿದ್ದು, ಸುಸಜ್ಜಿತ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದೆ. ರಸ್ತೆಯ ಇಕ್ಕೆಲಗಳ ಪೊದೆಗಳನ್ನು ತಕ್ಷಣ ತೆರವುಗೊಳಿಸಬೇಕು ಮತ್ತು ಕಡಬ ಪೇಟೆಯ ಅಪಾಯಕಾರಿ ಮರಗಳನ್ನು ಕಡಿಯಬೇಕು ಎಂದು ಸದಸ್ಯ ಆಶ್ರಫ್ ಶೇಡಿಗುಂಡಿ ಒತ್ತಾಯಿಸಿದರು.

ಆಲಂಕಾರು ಗ್ರಾಮದ ಡಿಸಿ ಮನ್ನಾ ಭೂಮಿಯ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆ ಒಂದು ವರ್ಷದಿಂದ ನನೆಗುದಿಗೆ ಬಿದ್ದಿರುವ ಬಗ್ಗೆ ಸದಸ್ಯ ಮೋನಪ್ಪ ವಳಕಡಮ ಆಕ್ರೋಶ ಹೊರಹಾಕಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದಾಗ, ೧೦ ದಿನಗಳ ಒಳಗಾಗಿ ಜಂಟಿ ಸರ್ವೆಗೆ ದಿನ ನಿಗದಿಪಡಿಸುವುದಾಗಿ ಉಪತಹಶೀಲ್ದಾರ್ ಭರವಸೆ ನೀಡಿದರು.

 ಲೈಸನ್ಸ್ ಸರ್ವೆಯರ್‌ಗಳ ಮುಷ್ಕರ: ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮನವಿ: ರಾಜ್ಯದಲ್ಲಿ ಲೈಸನ್ಸ್ ಸರ್ವೆಯರ್‌ಗಳ ಪ್ರತಿಭಟನೆಯಿಂದಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆಗಳು ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುವಂತೆ ಸದಸ್ಯರು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಭಾಗೀರಥಿ ಮುರುಳ್ಯ, “ಈಗಾಗಲೇ ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಭೆಯಲ್ಲಿ ಪ್ರಸ್ತಾಪವಾದ ಎಲ್ಲಾ ಕಾನೂನಾತ್ಮಕ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು,” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (EO) ನವೀನ್ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕೆಡಿಪಿ ಸದಸ್ಯರಾದ ಗಿರೀಶ್ ಇಚ್ಲಂಪಾಡಿ, ಉಷಾ ಒ.ಕೆ ನೆಲ್ಯಾಡಿ, ಪದ್ಮನಾಭ ಗೌಡ ಗುಂಡ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

Related Articles

Latest Articles