
ಕಡಬ: ಜಾಗತಿಕ ತಾಪಮಾನ ಏರಿಕೆ ಮತ್ತು ಪ್ರಕೃತಿಯ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳ ಈ ದಿನಗಳಲ್ಲಿ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪನ್ಯ ವಾರ್ಡ್ನ ಬದ್ರಿಯಾ ಜುಮಾ ಮಸೀದಿಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಅತ್ಯಂತ ಅರ್ಥಪೂರ್ಣ ಹಾಗೂ ಹಸಿರು ಪ್ರೇಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪನ್ಯ ವಾರ್ಡ್ ಸದಸ್ಯ ಮಹಮ್ಮದ್ ಫೈಝಲ್ ಅವರು, “ಪರಿಸರ ಸಂರಕ್ಷಣೆ ಎಂಬುದು ಕೇವಲ ಒಂದು ದಿನದ ಆಚರಣೆ ಅಥವಾ ಪ್ರದರ್ಶನಕ್ಕೆ ಸೀಮಿತವಾಗಬಾರದು. ಅದು ನಮ್ಮ ದೈನಂದಿನ ಜೀವನದ ಧರ್ಮವಾಗಬೇಕು. ಪ್ರಸ್ತುತ ದಿನಗಳಲ್ಲಿ ಕಾಡು-ಮೇಡುಗಳು ನಾಶವಾಗಿ ಹಸಿರು ವಲಯ ಕ್ಷೀಣಿಸುತ್ತಿರುವುದು ನಮ್ಮದೇ ಭವಿಷ್ಯಕ್ಕೆ ಆಪತ್ತನ್ನು ತರಲಿದೆ. ಪ್ರತಿಯೊಬ್ಬರೂ ತಮ್ಮ ಮನೆ, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಆವರಣಗಳನ್ನು ಹಸಿರಾಗಿಸಲು ಸಂಕಲ್ಪ ಮಾಡಬೇಕು. ಕೇವಲ ಸಸಿಗಳನ್ನು ನೆಟ್ಟು ಫೋಟೋ ತೆಗೆಸಿಕೊಂಡರೆ ಸಾಲದು, ಬದಲಿಗೆ ಅವು ಮರವಾಗಿ ಬೆಳೆಯುವವರೆಗೂ ಜವಾಬ್ದಾರಿಯಿಂದ ಪೋಷಿಸುವ ಕೆಲಸವಾಗಬೇಕು” ಎಂದು ಕಳಕಳಿಯ ವಿನಂತಿ ಮಾಡಿದರು.
ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷಶರೀಫ್ ಫೈಝಿ ಉಸ್ತಾದ್ ಮತ್ತು ಖತೀಬರಾದ ರಜಾಕ್ ದಾರಿಮಿ ಉಸ್ತಾದ್ ಅವರ ನೇತೃತ್ವ ಹಾಗೂ ಸಮ್ಮುಖದಲ್ಲಿ ನಡೆದ ಈ ಹಸಿರು ಅಭಿಯಾನದಲ್ಲಿ ಇಡೀ ವಾರ್ಡ್ನ ಪ್ರಮುಖರು ಒಟ್ಟಾಗಿ ಕೈಜೋಡಿಸಿ ಗಿಡಗಳಿಗೆ ನೀರೆರೆಯುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು.


ಈ ಸಂದರ್ಭದಲ್ಲಿ ಪನ್ಯ ವಾರ್ಡ್ ಅಧ್ಯಕ್ಷ ಹಮೀದ್ ಪನ್ಯ, ಮುಖಂಡರಾದ ಇಂತಿಯಾಜ್ ಪನ್ಯ, ಕಲೀಂ ಪನ್ಯ, ಇಬ್ರಾಹಿಂ ಪನ್ಯ, ಶಾಫಿ ಪನ್ಯ, ಖಾದರ್ ಪನ್ಯ, ಮುಸ್ತಫಾ ಪನ್ಯ, ಉಸ್ಮಾನ್ ಪನ್ಯ, ಜಮಾಲ್ ನಾಗಮಾರ್, ಸುಲೈಮಾನ್ ಪನ್ಯ, ನಿಜಾಂ ಪನ್ಯ, ಸಾದಿಕ್ ನಾಗಮಾರ್ ಹಾಗೂ ರಫೀಕ್ ಪನ್ಯ ಸೇರಿದಂತೆ ಜಮಾಅತ್ನ ಪದಾಧಿಕಾರಿಗಳು, ಯುವಕರು ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು, ಸಸಿ ನೆಡುವ ಅಭಿಯಾನವನ್ನು ಯಶಸ್ವಿಗೊಳಿಸಿದರು.
