
ಕಡಬ: ಪತ್ನಿಯ ಶವ ಪತ್ತೆಯಾಗಿದ್ದು, ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ಶನಿವಾರ (ಜೂನ್ 20) ಅಪರಾಹ್ನ ಬೆಳಕಿಗೆ ಬಂದಿದೆ.


ಬಾಡಿಗೆ ಮನೆಯಲ್ಲಿ ಪತ್ತೆಯಾದ ಶವಗಳು:ಮೂಲತಃ ಕಾರ್ಕಳದ ಬಜಗೋಳಿ ನಿವಾಸಿಯಾದ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿಯೇ ಮೃತಪಟ್ಟ ದುರ್ದೈವಿಗಳು. ಇವರು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು, ಆಲಂಕಾರು ಕಜಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಶನಿವಾರದಂದು ಇವರಿಬ್ಬರು ತಮ್ಮ ಬಾಡಿಗೆ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ:
ಪತಿಯಾದ ದಿನೇಶ್ ಎಂಬಾತನೇ ಮೊದಲು ಪತ್ನಿ ಸಂಗೀತಳನ್ನು ಕೊಲೆ ಮಾಡಿ, ತದನಂತರ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಮೃತ ದಂಪತಿಗೆ ಎರಡು ವರ್ಷದ ಪುಟ್ಟ ಹೆಣ್ಣು ಮಗುವಿದೆ.


ಒಂದು ತಿಂಗಳ ಹಿಂದಷ್ಟೇ ಆಲಂಕಾರಿನಲ್ಲಿ ತಾವು ನಡೆಸುತ್ತಿದ್ದ ಹೋಟೆಲ್ ಉದ್ಯಮವನ್ನು ಬಿಟ್ಟು ಬೇರೆಡೆಗೆ ತೆರಳಿದ್ದ ಈ ದಂಪತಿ, ನಿನ್ನೆಯಷ್ಟೇ (ಶುಕ್ರವಾರ) ಆಲಂಕಾರಿನ ಕಜಿಯಲ್ಲಿದ್ದ ಬಾಡಿಗೆ ಮನೆಗೆ ಪುನಃ ವಾಪಸ್ ಬಂದಿದ್ದರು. ಶನಿವಾರ ಘಟನೆ ನಡೆದ ಸಂದರ್ಭದಲ್ಲಿ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ:
ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕರಾದ (PSI) ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ದಂಪತಿಯ ಸಾವಿಗೆ ನಿಖರವಾದ ಕಾರಣವೇನೆಂಬುದರ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ
