
ಸುಳ್ಯ: ರಾಜಕೀಯವಾಗಿ ಉನ್ನತ ಅಧಿಕಾರ ಪಡೆಯುವ ಮೊದಲೂ ಸರಳತೆಯ ಮೂಲಕವೇ ಬದುಕಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು, ಅಧಿಕಾರ ಸಿಕ್ಕ ಬಳಿಕವೂ ತಮ್ಮ ವ್ಯಕ್ತಿತ್ವ ಮತ್ತು ಸರಳ ಜೀವನದ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಿದ್ದಾರೆ. ಗ್ರಾಮೀಣ ಬದುಕಿನ ಕಷ್ಟ-ನಷ್ಟಗಳ ಅರಿವಿರುವ ಶಾಸಕರು, ಇದೀಗ ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಕರೆಗೆ ಸ್ಪಂದಿಸಿ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ.


ಪ್ರಧಾನಿ ಕರೆಗೆ ಶಾಸಕಿಯ ವಿಶಿಷ್ಟ ಸ್ಪಂದನೆ:
ಇರಾನ್-ಅಮೆರಿಕಾ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಉಂಟಾಗಿದ್ದು, ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಮಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಅಧಿಕೃತ ಕಾರನ್ನು ಬದಿಗಿಟ್ಟು, ಸಾಮಾನ್ಯರಂತೆ ಬಸ್ ಹತ್ತಿ ಪ್ರಯಾಣ ಬೆಳೆಸಿದ್ದಾರೆ.
ಮೇ 16 ರಂದು ಬೆಳ್ಳಂದೂರು ಕಾಲೇಜಿಗೆ ಮುಖ್ಯ ಅತಿಥಿಯಾಗಿ ಹೋಗಬೇಕಿದ್ದ ಶಾಸಕರು, ಮುರುಳ್ಯದ ತಮ್ಮ ಮನೆಯಿಂದ ಬೆಳ್ಳಂದೂರಿಗೆ ಹೋಗಲು ಸರ್ಕಾರಿ ಬಸ್ ಏರಿದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ್ ಅವರು ಕೂಡ ಶಾಸಕರಿಗೆ ಸಾಥ್ ನೀಡಿದ್ದರು. ಬೆಳ್ಳಂದೂರಿನಲ್ಲಿ ಬಸ್ ಇಳಿದ ಶಾಸಕರು ಅಲ್ಲಿಂದ ರಿಕ್ಷಾ ಮೂಲಕ ಕಾಲೇಜು ಕಾರ್ಯಕ್ರಮ ತಲುಪಿದರು.
“ಬೆಂಗಳೂರಿಗೆ ಇನ್ಮುಂದೆ ಬಸ್ನಲ್ಲೇ ಹೋಗುತ್ತೇನೆ” – ಶಾಸಕಿ ಭಾಗೀರಥಿ
ತಮ್ಮ ಬಸ್ ಪ್ರಯಾಣದ ಅನುಭವದ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ, “ಪ್ರಧಾನಿಯವರ ಕರೆಯ ಮೇರೆಗೆ ನಾನು ಬಸ್ನಲ್ಲಿ ಬೆಳ್ಳಂದೂರಿಗೆ ಹೋಗಿದ್ದೆ. ಆದರೆ ಮಧ್ಯಾಹ್ನದ ಬಳಿಕ ಕಡಬಕ್ಕೆ ಹೋಗಲು ಸರಿಯಾದ ಸಮಯಕ್ಕೆ ಬಸ್ ಸಿಗದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಹೋಗಬೇಕಾಯಿತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕಿರುವುದರಿಂದ ಬಸ್ಸನ್ನೇ ಸಂಪೂರ್ಣ ಅವಲಂಬಿಸಲು ಸಾಧ್ಯವಾಗುವುದಿಲ್ಲ. ಆದರೆ, ಇನ್ನು ಮುಂದೆ ಬೆಂಗಳೂರಿಗೆ ಹೋಗುವಾಗ ಮಾತ್ರ ನಾನು ಬಸ್ನಲ್ಲೇ ಪ್ರಯಾಣಿಸುತ್ತೇನೆ,” ಎಂದು ತಿಳಿಸಿದರು.


ಶಾಸಕಿಯ ಬಸ್ ಪ್ರಯಾಣಕ್ಕೆ ಕಾಂಗ್ರೆಸ್ ಸ್ವಾಗತ:
ಬಿಜೆಪಿ ಶಾಸಕಿಯ ಈ ಬಸ್ ಪ್ರಯಾಣವನ್ನು ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ. ಅವರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ (ಶಕ್ತಿ ಯೋಜನೆ) ಪ್ರಯೋಜನವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಪಡೆದುಕೊಂಡಿರುವುದು ಸಂತೋಷದ ವಿಚಾರ. ಈ ಹಿಂದೆ ಗ್ಯಾರಂಟಿ ಯೋಜನೆಗಳನ್ನು ದೂಷಿಸುತ್ತಿದ್ದವರು ಇಂದು ಅದರ ಪ್ರಯೋಜನ ಪಡೆಯುತ್ತಿರುವುದು ಸ್ವಾಗತಾರ್ಹ. ಶಾಸಕರು ಪ್ರತಿದಿನ ಬಸ್ನಲ್ಲಿ ಓಡಾಡುತ್ತಾ ಶಕ್ತಿ ಯೋಜನೆಯ ಲಾಭ ಪಡೆಯುವುದರ ಜೊತೆಗೆ, ಪ್ರಧಾನಿಯವರ ಇಂಧನ ಉಳಿತಾಯದ ಕರೆಯನ್ನೂ ಅಳವಡಿಸಿಕೊಳ್ಳಲಿ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ನಡುವೆಯೂ ಪ್ರಧಾನಿ ಕರೆಗೆ ಗೌರವ ನೀಡಿ, ಬಸ್ ಪ್ರಯಾಣ ಬೆಳೆಸಿದ ಶಾಸಕಿಯ ಈ ನಡೆ ಸದ್ಯ ತಾಲೂಕಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
