ಕಡಬ ಪಟ್ಟಣ ಪಂಚಾಯತ್: ಘನತ್ಯಾಜ್ಯ ಘಟಕದಲ್ಲಿ ಜೆಸಿಬಿ ಘರ್ಜನೆ: ಪಚ್ಚನಾಡಿ ಘಟಕಕ್ಕೆ ತ್ಯಾಜ್ಯ ಶಿಫ್ಟ್

kadaba times

 ಕಕ್ಕೇತ್ತಿಮಾರು ಘನತ್ಯಾಜ್ಯ ಘಟಕದ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ಫಲ ನೀಡಿದೆ. ಕಸ ವಿಲೇವಾರಿ ಕಾರ್ಯ ಆರಂಭವಾಗಿದ್ದು, ಮಂಗಳೂರಿನ ಪಚ್ಚನಾಡಿ ಘಟಕಕ್ಕೆ ತ್ಯಾಜ್ಯ ಸಾಗಿಸಲಾಗುತ್ತಿದೆ.

kadaba times
uniq

ಕಡಬ: ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಕ್ಕೇತ್ತಿಮಾರು ಎಂಬಲ್ಲಿರುವ ಘನತ್ಯಾಜ್ಯ ಘಟಕದ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ನಡೆಸಿದ ತೀವ್ರ ಪ್ರತಿಭಟನೆಯ ಬೆನ್ನಲ್ಲೇ, ಪಟ್ಟಣ ಪಂಚಾಯತ್ ಎಚ್ಚೆತ್ತುಕೊಂಡಿದೆ. ಘಟಕದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆತಿದೆ.

ಕಕ್ಕೇತ್ತಿಮಾರು ಘನತ್ಯಾಜ್ಯ ಘಟಕದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕಸದ ರಾಶಿ ಬಿದ್ದು ಪರಿಸರದಲ್ಲಿ ವಿಪರೀತ ದುರ್ವಾಸನೆ ಹರಡುತ್ತಿತ್ತು. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿತ್ತು ಹಾಗೂ ಬೀದಿ ನಾಯಿಗಳ ಕಾಟದಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಕಳೆದ ಗುರುವಾರ ಈ ಭಾಗದ ನಾಗರಿಕರು ಒಗ್ಗೂಡಿ ತ್ಯಾಜ್ಯ ಸಾಗಾಟದ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸೋಮವಾರ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು. ಜೊತೆಗೆ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕಕ್ಕೂ (STP) ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮಂಗಳೂರಿಗೆ ತ್ಯಾಜ್ಯ ಸಾಗಾಟ

ನಾಗರಿಕರ ಒತ್ತಡಕ್ಕೆ ಮಣಿದ ಪಟ್ಟಣ ಪಂಚಾಯತ್ ಆಡಳಿತ, ಸೋಮವಾರದಿಂದಲೇ ಕಸ ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇಲ್ಲಿ ಶೇಖರಣೆಯಾಗಿರುವ ಹಳೆಯ ತ್ಯಾಜ್ಯವನ್ನು ಲಾರಿಗಳ ಮೂಲಕ ಮಂಗಳೂರಿನ ಪಚ್ಚನಾಡಿ ಘಟಕಕ್ಕೆ ಸಾಗಿಸಲಾಗುತ್ತಿದೆ.

kadaba times
kadaba times

ಕೆಲಸಕ್ಕಿಳಿದ ಜೆಸಿಬಿ; ನಿಂತಿದ್ದ ಯಂತ್ರಗಳಿಗೆ ಕಾಯಕ

ತ್ಯಾಜ್ಯ ನಿರ್ವಹಣೆಗಾಗಿ ಪಟ್ಟಣ ಪಂಚಾಯತ್ ಈ ಹಿಂದೆ ಖರೀದಿಸಿದ್ದ ಒಂದು ಟಿಪ್ಪರ್ ಹಾಗೂ ಜೆಸಿಬಿ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಕೆಲಸವಿಲ್ಲದೆ ನಿಂತಲ್ಲೇ ನಿಂತಿದ್ದವು. ಇದೀಗ ಈ ಜೆಸಿಬಿಗೆ ಕೆಲಸ ಸಿಕ್ಕಿದ್ದು, ತಾತ್ಕಾಲಿಕ ನೆಲೆಯಲ್ಲಿ ಚಾಲಕನನ್ನು ನೇಮಿಸಿಕೊಳ್ಳಲಾಗಿದೆ. ಜೆಸಿಬಿ ಮೂಲಕ ಕಸವನ್ನು ಲಾರಿಗಳಿಗೆ ತುಂಬಿಸಿ ವಿಲೇವಾರಿ ಮಾಡಲಾಗುತ್ತಿದ್ದು, ಮಂಗಳವಾರವೂ ಈ ಕಾರ್ಯ ಮುಂದುವರಿದಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ನೀಡಿದ ಭರವಸೆಯಂತೆ ತೆರವು ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಎಂ. ಹನೀಫ್, ಮುಖ್ಯಾಧಿಕಾರಿ ಲೀಲಾವತಿ ಇ ಮತ್ತಿತರರು ಘಟಕಕ್ಕೆ ಭೇಟಿ ನೀಡಿ ಕಾರ್ಯಾಚರಣೆಯನ್ನು ವೀಕ್ಷಿಸಿದರು.

Related Articles

Latest Articles