
ಕಡಬದಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಹಾಗೂ 2026-27ನೇ ಸಾಲಿನ ಕ್ರಿಯಾ ಯೋಜನೆ ಕುರಿತು ಚರ್ಚಿಸಲಾಯಿತು.


ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯು ಇತ್ತೀಚೆಗೆ ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಅಧ್ಯಕ್ಷರಾದ ಮಹೇಶ್ ಕೆ. ಸವಣೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಭೆಯಲ್ಲಿ ಕಡಬ ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಇಂದು ಶೇಖರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂಬರುವ ಅವಧಿಗೆ ವೇದಿಕೆಯ ಚಟುವಟಿಕೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರಿಗೆ ಹಸ್ತಾಂತರಿಸಲಾಯಿತು.


ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಲ್ಲಿ ತಾಲೂಕಿನಲ್ಲಿ ಮದ್ಯವರ್ಜನ ಶಿಬಿರವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಕಡಬ ತಾಲೂಕಿನ 20 ಶೈಕ್ಷಣಿಕ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಜನಜಾಗೃತಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು 2026-27ನೇ ಸಾಲಿನ ಕ್ರಿಯಾ ಯೋಜನೆಯ ಗುರಿಗಳ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ-2ರ ನಿರ್ದೇಶಕರಾದ ಬಾಬು ನಾಯ್ಕ ಮಾತನಾಡಿ, “ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳು, ವಿಶೇಷವಾಗಿ ಸ್ವಾಸ್ಥ್ಯ ಸಂಕಲ್ಪ ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯುವ ಅಗತ್ಯವಿದೆ,” ಎಂದರು. ಕಡಬ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ವಾರ್ಷಿಕ ವರದಿ ವಾಚಿಸಿ, ಕಳೆದ ಸಭೆಯ ನಡಾವಳಿಗಳನ್ನು ಮಂಡಿಸಿದರು.
ಸಭೆಯಲ್ಲಿ ವಲಯವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಭೆಯಲ್ಲಿ ಕಡಬ ಯೋಜನಾ ಕಚೇರಿ ವ್ಯಾಪ್ತಿಯ ವಲಯವಾರು ಸಾಧನಾ ವರದಿಗಳನ್ನು ಮಂಡಿಸಿ, ಚರ್ಚಿಸಲಾಯಿತು.
