
ಬೈಕ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮೂಲದ ಸಾಫ್ಟ್ವೇರ್ ಉದ್ಯೋಗಿ ಸೂರಜ್ ರೈ (27) ಅವರು ಚಿಕಿತ್ಸೆ ಫಲಿಸದೆ ಮೇ 22ರ ಶುಕ್ರವಾರ ಮುಂಜಾನೆ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಮೃತ ಸೂರಜ್ ರೈ ಅವರು ಬೆಳ್ಳಾರೆಯ ಪ್ರಸಿದ್ಧ ಯಕ್ಷಗುರು ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು. ಸವಣೂರು ಅಂಬಾ ಬ್ರದರ್ಸ್ ತಂಡದ ಸಕ್ರಿಯ ಸದಸ್ಯರಾಗಿಯೂ ಅವರು ಗುರುತಿಸಿಕೊಂಡಿದ್ದರು.
ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್
ಮೇ 15ರಂದು ರಾತ್ರಿ ಸೂರಜ್ ರೈ ಅವರು ತಮ್ಮ ಬೈಕ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ, ಕುಣಿಗಲ್ ಬಳಿ ಕೋಳಿ ಸಾಗಾಟದ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಕುಣಿಗಲ್ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.


ಇಂದು ಪುತ್ತೂರಿನಲ್ಲಿ ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರವು ಮೇ 22ರ ಮಧ್ಯಾಹ್ನ 2 ಗಂಟೆಯ ವೇಳೆಗೆ ಬೆಳ್ಳಾರೆಯ ನಿವಾಸಕ್ಕೆ ತಲುಪಲಿದೆ. ತದನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಶವ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಸ್ನೇಹ, ತಂದೆ ವಾಸುದೇವ ರೈ, ತಾಯಿ ಶರ್ಮಿಳಾ ರೈ, ಸಹೋದರ ಸುದೀಪ್ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪ್ರತಿಭಾವಂತ ಯುವಕನ ಅಕಾಲಿಕ ನಿಧನಕ್ಕೆ ಸವಣೂರು ಅಂಬಾ ಬ್ರದರ್ಸ್ ತಂಡ ಹಾಗೂ ಬೆಳ್ಳಾರೆ, ಪುತ್ತೂರು ಭಾಗದ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
