
ಟಯರ್ ಅಂಗಡಿಯ ಮುಂದೆ ನಿಲ್ಲಿಸಿದ್ದ ಟಾಟಾ ಟಿಪ್ಪರ್ ಲಾರಿಯ ಕ್ಯಾಬಿನ್ ಬಾಗಿಲು ಮುರಿದು, ಸುಮಾರು 15,000 ರೂ. ಮೌಲ್ಯದ ಬ್ಯಾಟರಿಯನ್ನು ಕಳವು ಮಾಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


ನೆಲ್ಯಾಡಿ: ಇಲ್ಲಿನ ಸಂತೆಕಟ್ಟೆ ಬಳಿಯ ಟಯರ್ ಅಂಗಡಿಯೊಂದರ ಮುಂದೆ ರಿಚೋಲ್ ಹಾಕಲು ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯ ಕ್ಯಾಬಿನ್ ಬಾಗಿಲು ಮುರಿದು ಅದರಲ್ಲಿದ್ದ ಬ್ಯಾಟರಿಯನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಿವಾಸಿ, ಕೃಷಿಕರಾದ ಅಜೀಶ್ (29) ಎಂಬವರು ಕೃಷಿ ಚಟುವಟಿಕೆಗಾಗಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಹಳೆಯ ಟಾಟಾ ಟಿಪ್ಪರ್ ಲಾರಿಯನ್ನು ಖರೀದಿಸಿದ್ದರು. ಲಾರಿಯ ಟಯರ್ ರಿಚೋಲ್ ಮಾಡಿಸುವ ಸಲುವಾಗಿ ಏಪ್ರಿಲ್ 15ರಂದು ಸಂಜೆ ನೆಲ್ಯಾಡಿ ಸಂತೆಕಟ್ಟೆಯಲ್ಲಿರುವ ಜೇಮ್ಸ್ ಎಂಬವರಿಗೆ ಸೇರಿದ ‘ಜೀಸಸ್ ಟಯರ್ ಶಾಪ್’ ಬಳಿ ಲಾರಿಯನ್ನು ನಿಲ್ಲಿಸಿ, ಕೀಯನ್ನು ಅಂಗಡಿ ಮಾಲೀಕರಿಗೆ ನೀಡಿ ಕಾರ್ಕಳಕ್ಕೆ ತೆರಳಿದ್ದರು.


ಏಪ್ರಿಲ್ 21ರಂದು ಬೆಳಿಗ್ಗೆ ಅಂಗಡಿ ಮಾಲೀಕ ಜೇಮ್ಸ್ ಅವರು ಫಿರ್ಯಾದಿದಾರರಿಗೆ ಕರೆ ಮಾಡಿ, ಲಾರಿಯ ಕ್ಯಾಬಿನ್ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಒಳಗಿದ್ದ ಬ್ಯಾಟರಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಜೀಶ್ ಅವರು ಪರಿಶೀಲಿಸಿದಾಗ, ಲಾರಿಯಲ್ಲಿದ್ದ ಸುಮಾರು 15,000 ರೂ. ಮೌಲ್ಯದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿರುವುದು ದೃಢಪಟ್ಟಿದೆ.
ಈ ಬಗ್ಗೆ ಅಜೀಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅ.ಕ್ರ: 56/2026, ಕಲಂ: 303(2) BNS 2023 ರಂತೆ ಮೊಕದ್ದಮೆ ಹೂಡಿ ತನಿಖೆ ನಡೆಸುತ್ತಿದ್ದಾರೆ.
