
ತಾಯಿ ಮತ್ತು ಮಗಳು ಏಕಕಾಲದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ. ಮಗಳು ಕಾಲೇಜಿಗೆ ಫಸ್ಟ್ ಬಂದರೆ, ತಾಯಿ ಗೃಹಿಣಿಯಾಗಿಯೂ ಪರೀಕ್ಷೆ ಗೆದ್ದು ಸಾಧನೆ ಮೆರೆದಿದ್ದಾರೆ.


ಕಲಿಯುವ ಮನಸ್ಸಿದ್ದರೆ ವಯಸ್ಸು ಕೇವಲ ಸಂಖ್ಯೆಯಷ್ಟೇ” ಎಂಬುದನ್ನು ಬಂಟ್ವಾಳದ ತಾಯಿ ಮತ್ತು ಮಗಳು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಬಿ.ಸಿ. ರೋಡಿನ ಕೈಕಂಬ ನಿವಾಸಿಗಳಾದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.
ಬಿ.ಸಿ. ರೋಡಿನ ಕೈಕಂಬ ನಿವಾಸಿ, ಗೃಹಿಣಿ ನೇತ್ರಾವತಿ ವಿ.ಆರ್. ಅವರಿಗೆ ಪಿಯುಸಿ ಪದವಿ ಪಡೆಯಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಸಂಸಾರದ ಜವಾಬ್ದಾರಿಯ ನಡುವೆಯೂ ತಮ್ಮ ಶಿಕ್ಷಣದ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಇವರು, ಈ ವರ್ಷ ಖಾಸಗಿ ಅಭ್ಯರ್ಥಿಯಾಗಿ ಕಲಾ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ್ದರು. ಮೊದಲ ಪ್ರಯತ್ನದಲ್ಲೇ 257 ಅಂಕಗಳನ್ನು ಪಡೆಯುವ ಮೂಲಕ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಇವರ ಈ ಸಾಧನೆ ಓದು ನಿಲ್ಲಿಸಿದ ಅನೇಕ ಗೃಹಿಣಿಯರಿಗೆ ಹೊಸ ಸ್ಫೂರ್ತಿ ನೀಡಿದೆ.
ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪುತ್ರಿ
ಒಂದೆಡೆ ತಾಯಿ ಪರೀಕ್ಷೆ ಗೆದ್ದರೆ, ಇನ್ನೊಂದೆಡೆ ಮಗಳು ಹೇಮಶ್ರೀ ಆರ್. ಅತ್ಯುತ್ತಮ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ಬಿ.ಮೂಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹೇಮಶ್ರೀ, ಕಲಾ ವಿಭಾಗದಲ್ಲಿ 600ಕ್ಕೆ 562 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ತಾಯಿ-ಮಗಳಿಬ್ಬರೂ ಕಲಾ ವಿಭಾಗದಲ್ಲೇ ಪರೀಕ್ಷೆ ಬರೆದು ಯಶಸ್ವಿಯಾಗಿರುವುದು ವಿಶೇಷ.


ಮನೆಯಲ್ಲಿ ಹಬ್ಬದ ವಾತಾವರಣ
ಪತ್ನಿ ಮತ್ತು ಮಗಳ ಈ ಅಪರೂಪದ ಸಾಧನೆಗೆ ಕುಟುಂಬದ ಮುಖ್ಯಸ್ಥ, ನಂದಾವರ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. “ಪತ್ನಿಯ ಓದಿನ ಹಂಬಲಕ್ಕೆ ಬೆಂಬಲ ನೀಡಿದ್ದು ಸಾರ್ಥಕವೆನಿಸಿದೆ. ಮಗಳ ಸಾಧನೆಯೂ ಹೆಮ್ಮೆ ತಂದಿದೆ” ಎಂದು ಅವರು ಹಂಚಿಕೊಂಡಿದ್ದಾರೆ.
ಒಂದೇ ಮನೆಯಲ್ಲಿ ತಾಯಿ ಮತ್ತು ಮಗಳು ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆದು, ಒಟ್ಟಿಗೇ ಫಲಿತಾಂಶದ ಸಿಹಿ ಉಂಡಿರುವುದು ಬಂಟ್ವಾಳದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಹಿತೈಷಿಗಳು ಮತ್ತು ಸಾರ್ವಜನಿಕರು ಈ ಸಾಧಕ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
