ಕುಂತೂರು ಮಸೀದಿ ಬಳಿ ಗಲಾಟೆ: ಐವರ ವಿರುದ್ಧ FIR ದಾಖಲು

kadaba times

ಕಡಬ ತಾಲೂಕಿನ ಕುಂತೂರು ಮಸೀದಿ ಬಳಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೋಟೆಲ್‌ನಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದ ವಿಚಾರವೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗಿದೆ.

kadaba times
uniq

ಕಡಬ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಕಡಬ ತಾಲೂಕಿನ ಕುಂತೂರು ಮಸೀದಿಯ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ: ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ನಿವಾಸಿ ಕೆ. ಅಬ್ದುಲ್ ರವೂಫ್ ಎಂಬುವವರು ನೀಡಿದ ದೂರಿನಂತೆ, ಅವರ ತಮ್ಮ ರಾಝಿಕ್ ಕಳೆದ ಒಂದು ವಾರಗಳ ಹಿಂದೆ ಕುಂತೂರಿನ ಹೋಟೆಲೊಂದರಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು. ಈ ವಿಚಾರವಾಗಿ ಅಲ್ಲಿಗೆ ಬಂದಿದ್ದ ಅಬೂಬಕ್ಕರ್ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಹಲ್ಲೆ ಮತ್ತು ಬೆದರಿಕೆ: ದಿನಾಂಕ 23-04-2026 ರಂದು ಸಂಜೆ ಸುಮಾರು 6:00 ಗಂಟೆಗೆ ಜಗಳವನ್ನು ರಾಜಿ ಮಾಡಿಕೊಳ್ಳುವ ಉದ್ದೇಶದಿಂದ ಅಬ್ದುಲ್ ರವೂಫ್ ಅವರು ಕುಂತೂರು ಮಸೀದಿಯ ಬಳಿ ಅಬೂಬಕ್ಕರ್ ಅವರ ಮೊಮ್ಮಗ ಅಮನ್ ಎಂಬುವವರನ್ನು ಕರೆಸಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಮನ್ ಮತ್ತು ಇತರ ನಾಲ್ವರು ತಂಡವು ಅಬ್ದುಲ್ ರವೂಫ್ ಮೇಲೆ ಹಲ್ಲೆ ನಡೆಸಿದ್ದಾರೆ.

kadaba times
kadaba times

ಆರೋಪಿ ಅಮನ್ ಚೂರಿಯ ಹಿಡಿಯಿಂದ ರವೂಫ್ ಅವರ ಎದೆಗೆ ಗುದ್ದಿದ್ದು, ಇಲ್ಯಾಸ್ ಎಂಬುವವನು ಕಬ್ಬಿಣದ ರಾಡಿನಿಂದ ಬಲಗಾಲು ಮತ್ತು ಹೊಟ್ಟೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಳಿದ ಆರೋಪಿಗಳಾದ ರಿಯಾಜ್, ತಾಜುದ್ದೀನ್ ಮತ್ತು ಎಂ.ಕೆ. ಹನೀಫ್ ಕೂಡ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಅಬ್ದುಲ್ ರವೂಫ್ ಅವರು ಪ್ರಸ್ತುತ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಅಮನ್, ಎಂ.ಕೆ. ಆಸಿಫ್, ಕೆ.ಎಂ.ಎಸ್ ತಾಜುದ್ದೀನ್, ಕೆ.ಎಂ.ಎಸ್ ರಿಯಾಜ್ ಮತ್ತು ನೆಕ್ಕರೆ ಇಲ್ಯಾಸ್ ವಿರುದ್ಧ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Latest Articles