
:ಡಿಜಿಟಲ್ ಪಾವತಿಯ ಹೆಸರಿನಲ್ಲಿ ಪೆಟ್ರೋಲ್ ಪಂಪ್ ಸಿಬ್ಬಂದಿಗೆ ವಂಚಿಸಿ, ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಕಿಡಿಗೇಡಿಗಳು ಪರಾರಿಯಾದ ಘಟನೆ ಪುತ್ತೂರಿನ ಕೆಮ್ಮಾಯಿಯಲ್ಲಿ ನಡೆದಿದೆ.


ಕೆಮ್ಮಾಯಿಯ ಪೆಟ್ರೋಲ್ ಪಂಪ್ವೊಂದಕ್ಕೆ ಕಾರಿನಲ್ಲಿ ಬಂದ ಅಪರಿಚಿತರು, ತಮ್ಮ ವಾಹನಕ್ಕೆ 3,000 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಹಣ ಪಾವತಿಸುವಂತೆ ಸಿಬ್ಬಂದಿ ಕೇಳಿದಾಗ, ಫೋನಿನ ಮೂಲಕ UPI ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಹಣ ಪಾವತಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಸಿಬ್ಬಂದಿಗೆ ಪಾವತಿಯ ಖಚಿತ ಮಾಹಿತಿ ಸಿಗುವ ಮೊದಲೇ ಚಾಲಕ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ನಕಲಿ ನಂಬರ್ ಪ್ಲೇಟ್ ಪತ್ತೆ: ವಂಚನೆಗೊಳಗಾದ ಪೆಟ್ರೋಲ್ ಪಂಪ್ ಮಾಲೀಕರು ತಕ್ಷಣವೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಕಾರಿನ ನೋಂದಣಿ ಸಂಖ್ಯೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಸದರಿ ನಂಬರ್ ಬಗ್ಗೆ ತನಿಖೆ ನಡೆಸಿದಾಗ ಒಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಬಳಸಿದ ಕಾರಿನಲ್ಲಿದ್ದ ನೋಂದಣಿ ಸಂಖ್ಯೆ (Number Plate) ನಕಲಿ ಎಂಬುದು ದೃಢಪಟ್ಟಿದೆ.


ಯೋಜಿತವಾಗಿಯೇ ಈ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಪೆಟ್ರೋಲ್ ಪಂಪ್ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
