
ಕಡಬದ ಕನ್ವಾರೆ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 19 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಹೊಸೂರು ಮೂಲದ ಆರೋಪಿಯನ್ನು ಬಂಧಿಸಲಾಗಿದೆ.

ಕಡಬ: ಹಾಸನದಿಂದ ಕೇರಳಕ್ಕೆ ಕಂಟೈನರ್ ವಾಹನವೊಂದರಲ್ಲಿ ಅತ್ಯಂತ ಅಮಾನವೀಯವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 19 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳದ ಕಡೆಗೆ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಅವರ ನೇತೃತ್ವದ ತಂಡವು ಕಡಬದ ಕನ್ವಾರೆ ಎಂಬಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದರು.


ತಪಾಸಣೆ ವೇಳೆ ಕಂಟೈನರ್ ಒಳಗಡೆ ಕಿಕ್ಕಿರಿದು, ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿದ್ದ 19 ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಆರೋಪಿಯ ಬಂಧನ: ಘಟನೆಗೆ ಸಂಬಂಧಿಸಿದಂತೆ ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

