ಸುಬ್ರಹ್ಮಣ್ಯ ಪರಿಸರದಲ್ಲಿ ಭೀಕರ ಗಾಳಿ ಮಳೆ ಅಬ್ಬರ: ಬಳ್ಪ, ಯೇನೆಕಲ್ಲಿನಲ್ಲಿ ಮನೆ ಮೇಲೆ ಬಿದ್ದ ಮರಗಳು

kadaba times

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಬಳ್ಪ ಮತ್ತು ಯೇನೆಕಲ್ಲು ಗ್ರಾಮಗಳಲ್ಲಿ ಭೀಕರ ಗಾಳಿ ಮಳೆಗೆ ಮನೆಗಳು ಧರಾಶಾಹಿಯಾಗಿವೆ. ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸುಬ್ರಹ್ಮಣ್ಯಕ್ಕೆ ಬಂದ ಭಕ್ತರಿಗೆ ದೇವಳದಿಂದ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

kadaba times
uniq

ಸುಬ್ರಹ್ಮಣ್ಯ: ಕಳೆದ ಒಂದು ವಾರದಿಂದ ವಿಪರೀತ ಸೆಖೆಯಿಂದ ಕಂಗಾಲಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇಂದು (ಏಪ್ರಿಲ್ 20) ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಮಳೆಯಿಂದಾಗಿ ಕಾದ ಭೂಮಿ ತಂಪಾಗಿದ್ದರೂ, ಅತಿಯಾದ ಗಾಳಿಯ ರಭಸಕ್ಕೆ ಬಳ್ಪ ಮತ್ತು ಯೇನೆಕಲ್ಲು ಗ್ರಾಮಗಳಲ್ಲಿ ತೀವ್ರ ಹಾನಿ ಸಂಭವಿಸಿದೆ.

ಬಳ್ಪ ಗ್ರಾಮದಲ್ಲಿ ಮರ ಬಿದ್ದು ಮನೆಗಳು ಜಖಂ

ಬಳ್ಪ ಗ್ರಾಮದ ವ್ಯಾಪ್ತಿಯಲ್ಲಿ ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮದ ನಿವಾಸಿಗಳಾದ ಚಿತ್ತರಂಜನ್ ಜೋಗಿ ಹಾಗೂ ಹರಿಪ್ರಸಾದ್ ಉಕ್ಕಿನಮನೆ  ಅವರ ಮನೆಗಳ ಮೇಲೆ ಬೃಹತ್ ಮರಗಳು ಬಿದ್ದು ಅಪಾರ ಹಾನಿಯುಂಟಾಗಿದೆ. ಎಣ್ಣೆಮಜಲು ಎಂಬಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ (TC) ಮೇಲೆ ಮರ ಬಿದ್ದ ಪರಿಣಾಮ ಟಿಸಿ ಜಖಂಗೊಂಡಿದ್ದು, ಇಡೀ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ರಸ್ತೆ ಬದಿಯ ಹಲವು ಮರಗಳು ಧರಾಶಾಹಿಯಾಗಿದ್ದು, ಹಲವಾರು ವಿದ್ಯುತ್ ಕಂಬಗಳು ತುಂಡಾಗಿವೆ .

ಯೇನೆಕಲ್ಲಿನಲ್ಲಿ ತೋಟಗಳಿಗೆ ಹಾನಿ

ಯೇನೆಕಲ್ಲು ಗ್ರಾಮದ ಅಜಿರ್ಪೊಳಿ ಎಂಬಲ್ಲಿ ಬಿರುಗಾಳಿಯ ಆರ್ಭಟಕ್ಕೆ ಉದಯಕುಮಾರ್ ಮತ್ತು ಉಮೇಶ್ ಎಂಬುವವರ ಮನೆಯ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ಈ ಭಾಗದ ತೋಟಗಳಲ್ಲಿ ಅಡಿಕೆ ಮರಗಳು ನೆಲಸಮವಾಗಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದಾಗಿ ಕೃಷಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

kadaba times
kadaba times
ಸುಬ್ರಹ್ಮಣ್ಯದಲ್ಲಿ ಭಕ್ತರ ಹಿತರಕ್ಷಣೆಗಾಗಿ ದೇವಸ್ಥಾನದಿಂದ ಕ್ರಮ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಜೆ 5:30ರ ಸುಮಾರಿಗೆ ಆರಂಭವಾದ ಮಳೆ ಸುಮಾರು 45 ನಿಮಿಷಗಳ ಕಾಲ ಆರ್ಭಟಿಸಿತು. ಸರಣಿ ರಜೆ ಇರುವ ಕಾರಣ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮಳೆಯಿಂದಾಗಿ ಭಕ್ತರಿಗೆ ತೊಂದರೆಯಾಗದಂತೆ ಶ್ರೀ ದೇವಳದ ಆಡಳಿತ ಮಂಡಳಿ ಸೂಕ್ತ ವ್ಯವಸ್ಥೆ ಮಾಡಿದೆ

ಸ್ಕಂದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಭಕ್ತರಿಗೆ ಸುಗಮವಾಗಿ ತೀರ್ಥ ಪ್ರಸಾದ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.  ಕೊಠಡಿ ಸಿಗದೆ ತೊಂದರೆ ಅನುಭವಿಸುತ್ತಿರುವ ಭಕ್ತರಿಗಾಗಿ ದೇವಸ್ಥಾನದ ರಥಬೀದಿಯ ಸಭಾಂಗಣ ಹಾಗೂ ಛತ್ರದ ಸಭಾಂಗಣಗಳನ್ನು ರಾತ್ರಿ ವಾಸ್ತವ್ಯಕ್ಕಾಗಿ ತೆರೆಯಲಾಗಿದೆ. ದೇವಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಭಕ್ತರ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

Related Articles

Latest Articles